ಬಸ್ ಪ್ರಯಾಣಿಕರ ಮೊಬೈಲ್ ಕದಿಯುತ್ತಿದ್ದವರ ಬಂಧನ

Spread the love

ಬೆಂಗಳೂರು,ಮೇ17- ಬಸ್ ಪ್ರಯಾಣಿಕರ ಮೊಬೈಲ್‍ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿ, 1.50 ಲಕ್ಷ ರೂ. ಮೌಲ್ಯದ 14 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಆರ್.ಕೆ.ಹೆಗಡೆನಗರದ ಸಯ್ಯದ್ ಜಬೀವುಲ್ಲಾ ಅಲಿಯಾಸ್ ಸಯ್ಯದ್(23) ಮತ್ತು ಬಾಲಾಜಿನಗರದ ಮತೀನ್(22) ಬಂಧಿತ ಆರೋಪಿಗಳು.

ಇವರಿಬ್ಬರು ಸೇರಿಕೊಂಡು ಬಸ್‍ನಿಂದ ಇಳಿಯುವ ಪ್ರಯಾಣಿಕರ ಶರ್ಟ್ ಜೇಬ್‍ಗಳಿಂದ ಮೊಬೈಲ್‍ಗಳನ್ನು ಎಗರಿಸುತ್ತಿದ್ದರು. ಮೇ 9ರಂದು ರಾಮಕೃಷ್ಣ ಎಂಬುವರು ತಿರುಪತಿಯಿಂದ ಬೆಂಗಳೂರಿಗೆ ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಬಂದು ಹೆಬ್ಬಾಳ-ಕೆಂಪಾಪುರದ ಎಸ್ಟೀಮ್ ಮಾಲ್ ಮುಂಭಾಗದ ರಸ್ತೆಯಲ್ಲಿ ಬಸ್‍ನಿಂದ ಇಳಿಯುವಾಗ ಇವರ ಶರ್ಟ್ ಜೇಬಿನಲ್ಲಿದ್ದ ಸ್ಯಾಮ್‍ಸಂಗ್ ಮೊಬೈಲ್ ಕಳ್ಳತನವಾಗಿದೆ. ಈ ಬಗ್ಗೆ ಅವರು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಇನ್‍ಸ್ಪೆಕ್ಟರ್ ಗುರುಪ್ರಸಾದ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬಸ್ ಪ್ರಯಾಣಿಕರ ಮೊಬೈಲ್‍ಗಳನ್ನು ಕಳ್ಳತನ ಮಾಡುತ್ತಿದುದ್ದಾಗಿ ತಿಳಿಸಿದ್ದಾರೆ.

ಆರೋಪಿಗಳಿಂದ ಸ್ಯಾಮ್‍ಸ್‍ಂಗ್ ಮೊಬೈಲ್, 4 ಎಂಐಮೊಬೈಲ್, 2 ವಿವೋ, ಒಂದು ಓಪೋ, 1 ಹಾನರ್ ಫೋಣ್, ಮೋಟೋ ಫೋನ್, ಸ್ಯಾಮ್‍ಸಂಗ್, ಲೆನೋವಾ, ನೋಕಿಯಾ, ರೆಡ್‍ಮೀ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಇಬ್ಬರು ಆರೋಪಿಗಳು ಕಳ್ಳರಾಗಿದ್ದು, ಆರೋಪಿ ಸಯ್ಯದ್ ವಿರುದ್ಧ ಕೆಜಿಹಳ್ಳಿ ಠಾಣೆಯಲ್ಲಿ ದರೋಡೆಯತ್ನ ಪ್ರಕರಣ ದಾಖಲಾಗಿದೆ. ಮತ್ತೊಬ್ಬ ಆರೋಪಿ ಮತೀನ್ ವಿರುದ್ಧ ಎನ್‍ಡಿಪಿಎಸ್ ಪ್ರಕರಣಗಳು ದಾಖಲಾಗಿರುತ್ತವೆ.

Facebook Comments