ಬೆಂಗಳೂರು,ಆ.14- ನಗರದ ಸಮಗ್ರ ಅಭಿವೃದ್ಧಿಗೆ ಸದ್ಯದಲ್ಲೇ ಮೊಬಿಲಿಟಿ ಪ್ಲಾನ್ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬವರಾಜ ಬೊಮ್ಮಾಯಿ ಅವರು ತಿಳಿಸಿದರು.ವಿಧಾನಸೌಧದ ಮುಂಭಾಗ ಬೆಂಗಳೂರು ನಗರ ಸಾರಿಗೆ ಸಂಸ್ಥೆಯ 75 ವಿದ್ಯುತ್ ಚಾಲಿತ ಬಸ್‍ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರು ಬೆಳವಣಿಗೆಗೆ ಎಲ್ಲಾ ದಿಕ್ಕಿನಲ್ಲೂ ಸರಿಸಮನಾಗಿ ಆಗಬೇಕು. ಕೇವಲ ಸಂಚಾರ ಸುಧಾರಣೆ ಮಾತ್ರವಲ್ಲ. ಸಮಗ್ರವಾಗಿ ಅಭಿವೃದ್ಧಿಯಾಗಬೇಕಿದೆ ಎಂದರು.ಬಿಎಂಟಿಸಿಗೆ ಪ್ರಸಕ್ತ ಸಾಲಿನಲ್ಲಿ 270 ಕೋಟಿ ರೂ. ಸಹಾಯ ಧನ ನೀಡುತ್ತಿದ್ದು, 420 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೋವಿಡ್ ನಂತರ ಸಕಾಲಕ್ಕೆ ಸಿಬ್ಬಂದಿಗಳಿಗೆ ವೇತನ ನೀಡಿದೆ ಎಂದು ಹೇಳಿದರು.
ಇದೇ ರೀತಿ ಸಾರಿಗೆ ಸಂಸ್ಥೆಯ ಉಳಿದ ನಿಗಮಗಳಿಗೂ ನೆರವು ನೀಡಲಾಗಿದ್ದು, 3 ವರ್ಷದಲ್ಲಿ ಸಾರಿಗೆ ಸಂಸ್ಥೆಗಳಿಗೆ 3 ಸಾವಿರ ಕೋಟಿ ರೂ. ನೀಡಲಾಗಿದೆ. ಮುಂದೆಯೂ ಇದೇ ರೀತಿ ನೆರವನ್ನು ಮುಂದುವರೆಸಲಾಗುವುದಿಲ್ಲ. ಆರ್ಥಿಕವಾಗಿ ನಿಗಮಗಳೇ ಸ್ವಾವಲಂಬನೆಯನ್ನು ಗಳಿಸಬೇಕಿದೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್ ಮೂರ್ತಿ ಅವರು ಸಾರಿಗೆ ಸಂಸ್ಥೆಗಳ ಸುಧಾರಣೆಯ ವರದಿ ನೀಡಿದ್ದು, ಆ ವರದಿಯನು ಅಧ್ಯಯನ ಮಾಡಲಾಗುತ್ತದೆ. ವರದಿಯ ಶಿಫಾರಸುಗಳ ಅನುಷ್ಠಾನಕ್ಕೂ ಶ್ರೀನಿವಾಸಮೂರ್ತಿ ಅವರನ್ನು ಮುಂದುವರೆಸಲಾಗುವುದು ಎಂದು ಹೇಳಿದರು.
ಸಾರಿಗೆ ಮತ್ತು ವಿದ್ಯುತ್ ಕ್ಷೇತ್ರಗಳು ದಕ್ಷತೆಯಿಂದ ಕೆಲಸ ಮಾಡಿದರೆ ಆರ್ಥಿಕಾಭಿವೃದ್ಧಿ ಹೆಚ್ಚಾಗಲಿದೆ. ಹೀಗಾಗಿ ಎರಡೂ ಕ್ಷೇತ್ರಗಳನ್ನು ಪುನಾರಚನೆ ಮಾಡಲಾಗುವುದು ಎಂದು ಹೇಳಿದರು.ವಿದ್ಯುತ್ ಸಹಾಯಧನ 14 ಸಾವಿರ ಕೋಟಿ ರೂ. ಚಾಲನೆ ನೀಡಲಾಗುತ್ತಿದೆ. ನಮ್ಮ ಸರ್ಕಾರ ಸಮಸ್ಯೆ ಎದುರಿಸಿ ಪರಿಹಾರ ಕೊಡಲು ಸಾಧ್ಯ ಎಂಬುದನ್ನು ತೋರಿಸಲಿದೆ ಎಂದರು.
ಐದು ಸಾವಿರ ಕೋಟಿ ರೂ. ಆದಾಯ ಕೊರತೆಯಿದ್ದು, ಎಲ್ಲೆಲ್ಲಿ ಆದಾಯ ಹೆಚ್ಚಿಸಬಹುದು ಎಂಬುದನ್ನು ಅಧಿಕಾರಿಗಳಿಗೆ ಸೂಚಿಸಿದ ನಂತರ ಗುರಿಗಿಂತ 15 ಸಾವಿರ ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹವಾಯಿತು ಎಂದು ಹೇಳಿದರು.
ಆರ್ಥಿಕ ಬೆಳವಣಿಗೆಯಲ್ಲಿ ಸಾರಿಗೆ ಪ್ರಮುಖ ಪಾತ್ರ ವಹಿಸಲಿದೆ. ಬೆಂಗಳೂರಿನಲ್ಲಿ 1.25 ಕೋಟಿ ಜನ ಸಂಖ್ಯೆಯಿದ್ದು, ಜನಸಂಖ್ಯೆಗೆ ಸರಿಸಮನಾದ ವಾಹನಗಳಿವೆ. ಜನ ಸಂಖ್ಯೆಗಿಂತ ಹೆಚ್ಚು ವಾಹನಗಳು 2-3 ವರ್ಷಗಳಲ್ಲಿ ಹೆಚ್ಚಾಗಲಿದೆ. ಏಕೆಂದರೆ ಬೆಂಗಳೂರಿನಲ್ಲಿ ಪ್ರತಿನಿತ್ಯ 5 ಸಾವಿರ ಹೊಸ ವಾಹನಗಳು ರಸ್ತೆಗೆ ಬರುತ್ತಿವೆ. ಬಿಎಂಟಿಸಿಯನ್ನು ಮತ್ತೆ ಎದ್ದು ನಿಲ್ಲಿಸುವಂತಹ ಸಂಕಲ್ಪ ಸರ್ಕಾರದ್ದು ಎಂದು ತಿಳಿಸಿದರು.
ಬಿಎಂಟಿಸಿ ಅಧ್ಯಕ್ಷ ಎನ್.ಎಸ್.ನಂದೀಶ್ ರೆಡ್ಡಿ ಮಾತನಾಡಿ, 45 ವರ್ಷ ಮೇಲ್ಪಟ್ಟ ಸಂಸ್ಥೆ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆಗೆ ಜಯದೇವ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.ಬಿಎಂಟಿಸಿ ರಜತ ಮಹೋತ್ಸವ ಸಂದರ್ಭದಲ್ಲಿ ಅಪಘಾತ ರಹಿತ ಬಸ್ ಚಾಲನೆ ಮಾಡಿದ ಚಾಲಕರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಅಪಘಾತದಲ್ಲಿ ಮೃತಪಟ್ಟ ಚಾಲಕರ ಕುಟುಂಬಕ್ಕೆ 30 ಲಕ್ಷ ಆರೋಗ್ಯ ವಿಮೆ ಒದಗಿಸಲು ಕೆನರಾ ಬ್ಯಾಂಕ್‍ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಿಎಂಟಿಸಿ ರಜತ ಮಹೋತ್ಸವ ಅಂಗವಾಗಿ ನಾಳೆ ಬಿಎಂಟಿಸಿ ಬಸ್‍ಗಳಲ್ಲೂ ಉಚಿತ ಪ್ರಯಾಣ ಕಲ್ಪಿಸಲಾಗಿದೆ ಎಂದು ನಂದೀಶ್ ರೆಡ್ಡಿ ತಿಳಿಸಿದರು.ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧಾನಪರಿಷತ್ ಸದಸ್ಯ ಎಂ.ನಾಗಾಜ್ ಯಾದವ್, ಸಾರಿಗೆ ಇಲಾಖೆ ಕಾರ್ಯದರ್ಶಿ ಪ್ರಸಾದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ, ನಿವೃತ್ತ ಐಎಎಸ್ ಅಕಾರಿ ಶ್ರೀನಿವಾಸಮೂರ್ತಿ, ಸ್ವಿಚ್ ಇಂಡಿಯಾದ ಮುಖ್ಯಕಾರ್ಯನಿರ್ವಹಣಾಕಾರಿ ಮಹೇಶ್ ಬಾಬು ಮತ್ತಿತರರು ಪಾಲ್ಗೊಂಡಿದ್ದರು.