ಆಧುನಿಕ ಭಗೀರಥ ಕೆರೆ ಕಾಮೇಗೌಡ ಇನ್ನಿಲ್ಲ

Social Share

ಮಳವಳ್ಳಿ,ಅ.17- ಕೆರೆಗಳನ್ನು ಸಂರಕ್ಷಣೆ ಮಾಡಿ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಆಧುನಿಕ ಭಗೀರಥ ಕೆರೆ ಕಾಮೇಗೌಡರು (86) ಇಂದು ಬೆಳಿಗ್ಗೆ ನಿಧನರಾದರು.

ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದಾಸನದೊಡ್ಡಿ, ಕುಂದೂರು ಬೆಟ್ಟ ಸುತ್ತ ಮುತ್ತಲಿನ ಅರಣ್ಯ ಪರಿಸರದಲ್ಲಿ 16 ಕೆರೆಗಳನ್ನು ನಿರ್ಮಾಣ ಮಾಡಿ, ಸಮರ್ಥವಾಗಿ ಸಂರಕ್ಷಣೆ ಮಾಡಿದ ಕಾಮೇಗೌಡರು ಸಮಾಜಕ್ಕೆ ಮತ್ತು ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಆಧುನಿಕ ಭಗೀರಥ ಎಂದೇ ಖ್ಯಾತಿ ಪಡೆದಿದ್ದರು.

ಪ್ರಾಣಿ ಪ್ರಿಯ ಗೌಡರು ಕುರಿ ಕಾಯುತ್ತಲೇ ತಮ್ಮ ಸ್ವಂತ ಸಂಪಾದನೆಯ ಹಣದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರಿಂದ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅನೇಕ ಸಂಘ-ಸಂಸ್ಥೆಗಳು ಕೂಡ ಪ್ರಶಸ್ತಿಗಳನ್ನು ನೀಡಿವೆ.

ಇಳೀ ವಯಸ್ಸಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವೇಳೆಯಲ್ಲಿ ಗೌಡರನ್ನು ಜಿಲ್ಲಾ ಆಸ್ಪತ್ರೆಗೆ ಕರೆದು ತಂದು ಚಿಕಿತ್ಸೆ ನೀಡುವ ವೇಳೆಯಲ್ಲೇ ನಂಗೆ ಈ ಆಲೋಪತಿ ಚಿಕಿತ್ಸೆ ಒಗ್ಗುವುದಿಲ್ಲ ಎಂದು ಆಸ್ಪತ್ರೆಯಿಂದಲೇ ಎದ್ದು ಹೋಗಿ ತಮ್ಮ ಸರಳತೆ ಜೀವನ ಶೈಲಿಯಿಂದ ಆರೋಗ್ಯವನ್ನು ಸರಿಪಡಿಸಿಕೊಂಡಿದ್ದನ್ನು ಸ್ಮರಿಸಬಹುದು.

ಪ್ರಧಾನಿ ಮೋದಿ ಶ್ಲಾಘನೆ: ಅಂತರ್ಜಲ ವೃದ್ಧಿಯಲ್ಲಿ ದೇಶದ ಗಮನವನ್ನು ಸೆಳೆದ 16 ಕೆರೆಗಳನ್ನು ನಿರ್ಮಿಸಿದ್ದ ಕೆರೆ ಕಾಮೇಗೌಡರ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್‍ನಲ್ಲಿ ಆಧುನಿಕ ಭಗೀರಥ ಮಾದರಿಯಲ್ಲಿ ಕಾಮೇಗೌಡರು ಮಾಡಿರುವ ಜಲಯಜ್ಞದಿಂದ ಸಾವಿರಾರು ಮಂದಿ ಪ್ರತಿಫಲ ಪಡೆದಿದ್ದಾರೆ. ಇಂತಹವರು ದೇಶದಲ್ಲಿ ಇರುವುದು ನಿಜಕ್ಕೂ ಪುಣ್ಯ. ಕೆರೆ- ಕಾಲುವೆ ನಿರ್ಮಿಸಿ ಜನ-ಜಾನುವಾರುಗಳಿಗೆ ನೀರು ಕೊಟ್ಟಿದ್ದಾರೆ.ಇವರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಕೂಡ ಕೆರೆ ಕಾಮೇಗೌಡರನ್ನು ಪರಿಸರ ಸಂರಕ್ಷಕ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಹಲವು ಸಂಘ ಸಂಸ್ಥೆಗಳು ನೀಡಿದ ಪ್ರಶಸ್ತಿಗಳಿಂದ ಬಂದ 15 ಲಕ್ಷಕ್ಕೂ ಹೆಚ್ಚು ಹಣವನ್ನು ಕೆರೆಗಳ ನಿರ್ಮಾಣಕ್ಕೆ ಬಳಸಿದ್ದರು ಎಂದೆಲ್ಲೆ ಹಾಡಿ ಹೊಗಳಿದ್ದರು.

ವಿವಿಧ ಪ್ರಶಸ್ತಿ: ಇವರ ಜನಪರ ಕೆಲಸ ಗುರುತಿಸಿ ಹಲವು ಪ್ರಶಸ್ತಿಗಳು ಅವರನ್ನು ಹರಸಿ ಬಂದವು. ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ, ಬಸವಶ್ರೀ ಪ್ರಶಸಿಗಳು ಸೇರಿದಂತೆ ಇತರೆ ಸಂಘ -ಸಂಸ್ಥೆಗಳು, ಮಠಗಳು ಇವರಿಗೆ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದವು. ಕೆಎಸ್‍ಆರ್‍ಟಿಸಿ ಕಾಮೇಗೌಡರು ಜೀವಿತಾವಯವರೆಗೆ ಸಾರಿಗೆ ಸಂಸ್ಥೆಯ ಎಲ್ಲಾ ಮಾದರಿಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಪಾಸ್ ನೀಡಿತ್ತು.

ಸಂತಾಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಂಸದೆ ಸುಮಲತಾ ಅಂಬರೀಶ್, ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಅನ್ನದಾನಿ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಕೆರೆ ಕಾಮೇಗೌಡರ ಅಂತ್ಯಕ್ರಿಯೆ ನೆರವೇರಿತು.

Articles You Might Like

Share This Article