ಹೌಸ್ಟನ್‍ನಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಕಾಶ್ಮೀರಿ ಪಂಡಿತರ ನಿಯೋಗ

Spread the love

ಹೌಸ್ಟನ್, ಸೆ.22-ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370ನೆ ವಿಧಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಭಾರೀ ಬೆಂಬಲ ವ್ಯಕ್ತಪಡಿಸಿರುವ ಕಾಶ್ಮೀರಿ ಪಂಡಿತರಿಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಮೋದಿ ನಿನ್ನೆ ರಾತ್ರಿ ಹೌಸ್ಟನ್ ನಗರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಕಾಶ್ಮೀರಿ ಪಂಡಿತರ ನಿಯೋಗದೊಂದಿಗೆ ಕೆಲ ಕಾಲ ಸಮಾಲೋಚನೆ ನಡೆಸಿದರು.
ನವ ಕಾಶ್ಮೀರ ನಿರ್ಮಾಣ ಉದ್ದೇಶದಿಂದಲೇ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಲಾಗಿದೆ.

ಇದಕ್ಕೆ ನಿಮ್ಮ ಸಮುದಾಯ (ಕಾಶ್ಮೀರಿ ಪಂಡಿತರು) ನೀಡಿರುವ ಅಪಾರ ಬೆಂಬಲಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ನಿಯೋಗಕ್ಕೆ ತಿಳಿಸಿದ್ದಾರೆ. ಅಮೆರಿಕದಲ್ಲಿ 7 ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರಿದ್ದು , ಅವರೆಲ್ಲರೂ ಸರ್ಕಾರದ ದಿಟ್ಟ ಕ್ರಮಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಋಣಿಯಾಗಿದ್ದೇನೆ ಎಂದು ಮೋದಿ ಹೇಳಿದರು.

ಮೋದಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೌಸ್ಟನ್‍ನ ಉದ್ಯಮಿ ಮತ್ತು ಕಾಶ್ಮೀರಿ ಪಂಡಿತರ ನಾಯಕ ಸುರೇಂದರ್ ಕೌಲ್, ನವ ಕಾಶ್ಮೀರ ನಿರ್ಮಾಣಕ್ಕೆ ಮತ್ತು ನಮ್ಮ ಸಮುದಾಯದ ರಕ್ಷಣೆಗೆ ಪ್ರಧಾನಿ ಅಭಯ ನೀಡಿದ್ದಾರೆ ಎಂದು ತಿಳಿಸಿದರು.

ಕಾಶ್ಮೀರಿ ಪಂಡಿತರು ಕಳೆದ 70 ವರ್ಷಗಳಿಂದ ಕಣಿವೆ ಪ್ರಾಂತ್ಯದ ಅಭಿವೃದ್ಧಿಗಾಗಿ ನೀಡುತ್ತಿರುವ ಕೊಡುಗೆಯನ್ನು ಪ್ರಧಾನಿ ನಮ್ಮೊಂದಿಗೆ ನಡೆದ ಮಾತುಕತೆ ವೇಳೆ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಕೌಲ್ ಹೇಳಿದರು.

Sri Raghav

Admin