ಜಿಲ್ಲಾಧ್ಯಕ್ಷನ ಮೇಲೆ ಮೊಹಮ್ಮದ್ ನಲಪಾಡ್‍ ಹಲ್ಲೆ..? ಯುವ ಕಾಂಗ್ರೆಸ್‍ನಲ್ಲಿ ಮತ್ತೆ ಕಿರಿಕ್

Social Share

ಬೆಂಗಳೂರು,ಜ.20- ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜಿದ್ದಾ ಜಿದ್ದಿ ಮತ್ತೆ ಶುರುವಾಗಿದೆ. ಯುವ ಕಾಂಗ್ರೆಸ್‍ನ ಮುಂದಿನ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳುವುದಾಗಿ ಹೇಳಿಕೊಳ್ಳುತ್ತಿರುವ ಮೊಹಮ್ಮದ್ ನಲಪಾಡ್ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡರ ಮೇಲೆ ಹಲ್ಲೆ ಮಾಡಿರುವ ಆರೋಪಗಳು ಕೇಳಿ ಬಂದಿವೆ.
2021ರ ಜನವರಿ 10ರಿಂದ 12ರವರೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಶಾಸಕ ಎನ್.ಎ.ಹ್ಯಾರಿಸ್‍ರ ಪುತ್ರ ನಲಪಾಡ್ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರಿಂದ ಯುವ ಕಾಂಗ್ರೆಸ್‍ನ ಹೈಕಮಾಂಡ್ ನಲಪಾಡ್‍ರನ್ನು ಬದಿಗೆ ಸರಿಸಿ, ಎರಡನೇಯದಾಗಿ ಹೆಚ್ಚು ಮತ ಗಳಿಸಿದ್ದ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ ಅವರಿಗೆ ಅಧ್ಯಕ್ಷ ಪಟ್ಟವಹಿಸಿತ್ತು.
ಇದರಿಂದ ಒಂದಷ್ಟು ಕಾಲ ಮುಸುಕಿನ ಗುದ್ದಾಟ ನಡೆದಿತ್ತು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಜೂನ್‍ನಲ್ಲಿ ಮಧ್ಯ ಪ್ರವೇಶ ಮಾಡಿ ರಕ್ಷಾ ರಾಮಯ್ಯ ಅವರನ್ನು ಬೆಂಬಲಿಸುತ್ತಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ನಲಪಾಡ್ ಅವರ ಪರವಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ, ಇಬ್ಬರು ಯುವ ನಾಯಕರ ನಡುವೆ ಅಧಿಕಾರ ಹಂಚಿಕೆಯ ಸೂತ್ರ ರೂಪಿಸಿದ್ದರು. ಅದರ ಪ್ರಕಾರ ಡಿಸೆಂಬರ್ 31ಕ್ಕೆ ರಕ್ಷಾ ರಾಮಯ್ಯ ಅಕಾರವನ್ನು ನಲಪಾಡ್‍ಗೆ ಬಿಟ್ಟುಕೊಡಬೇಕಿತ್ತು.
ಆದರೆ ಈ ನಡುವೆ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕಿ ಬಂಧನವಾಗಿತ್ತು. ವರ್ಚವಲ್ ಮಾದರಿಯಲ್ಲಿ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನಲಪಾಡ್ ತಮ್ಮ ಹಳೆಯ ಸ್ನೇಹಿತ ಶ್ರೀಕಿಯನ್ನು ಬಳಸಿಕೊಂಡು ಹ್ಯಾಕ್ ಮಾಡಿ ಹೆಚ್ಚು ಮತ ಪಡೆದಿದ್ದಾರೆ ಎಂಬ ಆರೋಪವನ್ನು ಕೆಲ ಯುವ ನಾಯಕರು ಹೈಕಮಾಂಡ್ ಗಮನಕ್ಕೆ ತಂದರು.
ಅದೇ ಸಮಯಕ್ಕೆ ಶ್ರೀಕಿ ರಾಹುಲ್ ಗಾಂಯವರ ಟ್ವಿಟರ್ ಖಾತೆಯನ್ನೇ ಹ್ಯಾಕ್ ಮಾಡಿ ಸುದ್ದಿಯಾಗಿದ್ದ. ಹಾಗಾಗಿ ಹೈಕಮಾಂಡ್ ನಲಪಾಡ್ ಪಡೆದ ಮತಗಳ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದು, ಮೊದಲಿನ ಒಪ್ಪಂದದಂತೆ ನಲಪಾಡ್‍ಗೆ ಅಕಾರ ಹಸ್ತಾಂತರಿಸುವ ವಿಷಯದಲ್ಲಿ ವಿಳಂಬ ಪ್ರದರ್ಶಿಸಿದೆ.
ಆದರೆ ಡಿ.ಕೆ.ಶಿವಕುಮಾರ್ ಅವರ ಆಶೀರ್ವಾದ ತಮ್ಮ ಮೇಲಿದೆ, ಶತಾಯಗತಾಯ ಫೆಬ್ರವರಿ ಮೊದಲ ವಾರದಲ್ಲಿ ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತೇನೆ ಎಂದು ಹೇಳಿಕೊಳ್ಳುತ್ತಿರುವ ನಲಪಾಡ್ ಅದಕ್ಕಾಗಿ ಪೂರ್ವ ತಯಾರಿ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಎರಡು ಬೃಹತ್ ಕಾರ್ಯಕ್ರಮ ನಡೆಸುವ ತಯಾರಿಗಳಾಗುತ್ತಿವೆ.
ಆ ಕಾರ್ಯಕ್ರಮಗಳ ಪೂರ್ವ ತಯಾರಿಗಾಗಿ ನಿನ್ನೆ ಜೆ ಡ್ಲ್ಯೂ ಮಾರಿಯೆಟ್ ಹೋಟೆಲ್ ನಲ್ಲಿ ಸಭೆ ಕರೆಯಲಾಗಿತ್ತು. ಅದರಲ್ಲಿ ಯುವ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು. ಸಂಜೆ ಯಲಹಂಕ ಕ್ಲಬ್‍ನಲ್ಲಿ ಯುವ ಪದಾಕಾರಿಗಳಿಗೆ ಪಾರ್ಟಿ ವ್ಯವಸ್ಥೆ ಮಾಡಲಾಗಿತ್ತು.
ಅದರಲ್ಲಿ ಭಾಗವಹಿಸಿದ್ದ ಬಳ್ಳಾರಿ ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡರ ಮೇಲೆ ನಲಪಾಡ್ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಕಳೆದ ಚುನಾವಣೆಯಲ್ಲಿ ನೀನು ಮಂಜುನಾಥ್ ಪರವಾಗಿ ಕೆಲಸ ಮಾಡಿದ್ದೀಯಾ ಎಂದು ಆರೋಪಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಿದ್ದು ಗೌಡ ಪಕ್ಷದ ಮುಖಂಡರ ಬಳಿ ಹೇಳಿಕೊಂಡಿದ್ದಾರೆ. ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಗೌಡ ಸ್ಥಳಕ್ಕೆ ಆಗಮಿಸಿ ಸಿದ್ದು ಅವರಿಗೆ ಬೆಂಗಾವಲು ಒದಗಿಸಿ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ತಾವು ಪೊಲೀಸರಿಗೆ ದೂರು ನೀಡಿ, ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡುವುದಾಗಿಯೂ ಸಿದ್ದು ಹಳ್ಳೇಗೌಡ ಹೇಳಿದ್ದಾರೆ. ಆದರೆ ಪಕ್ಷದ ಹಿರಿಯ ನಾಯಕರು ಮಧ್ಯ ಪ್ರವೇಶ ಮಾಡಿದ್ದು, ಸದ್ಯಕ್ಕೆ ಮೌನವಾಗಿರುವಂತೆ ಸೂಚಿಸಿದ್ದಾರೆ. ಶೀಘ್ರವೇ ಸಂಧಾನ ಸಭೆ ನಡೆಸಿ ಎಲ್ಲವನ್ನು ಸರಿ ಪಡಿಸುವುದಾಗಿ ಹಿರಿಯರು ಸಲಹೆ ನೀಡಿರುವುದರಿಂದ ಹಲ್ಲೆ ಪ್ರಕರಣ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡವಾಗಿದೆ. ನಲಪಾಡ್ ಅವರ ವರ್ತನೆಗಳು ಪುನರಾವರ್ತನೆಯಾಗುತ್ತಿರುವುದಕ್ಕೆ ಹಲವು ಜಿಲ್ಲಾ ಕಾಂಗ್ರೆಸ್ ನಾಯಕರು ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ.
ಈ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಸಂತ್ರಸ್ಥರಿಗೆ ಸಹಾಯ ಕೇಂದ್ರ ಸ್ಥಾಪಿಸುವ ಸಲುವಾಗಿ ಯುವ ಕಾಂಗ್ರೆಸ್‍ನ ಪದಾಕಾರಿಯಾಗಿರುವ ಭವ್ಯ ನರಸಿಂಹ ಮೂರ್ತಿ ಅವರ ಮೇಲೆ ನಲಪಾಡ್ ಬೆಂಬಲಿಗರು ಧಮಕಿ ಹಾಕಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಈಗ ಅದೇ ರೀತಿಯ ದೌರ್ಜನ್ಯ ಪ್ರಕರಣ ವರದಿಯಾಗಿದೆ.

Articles You Might Like

Share This Article