ಮಂಗಳೂರು, ಜು.31- ಸೂರತ್ಕಲ್‍ನಲ್ಲಿ ನಡೆದಿದ್ದ ಫಾಜಿಲ್ ಹತ್ಯೆಗೆ ಸಂಬಂಧಿಸಿದಂತೆ ಕಾರು ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಜು.28ರ ರಾತ್ರಿ ನಡೆದಿದ್ದ ಈ ಕೊಲೆ ಪ್ರಕರಣ ಕರಾವಳಿಯಲ್ಲಿ ಭಾರಿ ಸದ್ದು ಮಾಡಿದ್ದು, ಮಂಗಳೂರಿನವನೇ ಆದ ಕಾರು ಚಾಲಕ ಅಜಿತ್‍ನನ್ನು ಬಂಧಿಸಿದ್ದು ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾರೆ.
ಮಹತ್ತ್ವದ ಬೆಳವಣಿಗೆಯಲ್ಲಿ ಹಂತಕರು ಬಂದಿದ್ದ ಕಾರನ್ನು ಪತ್ತೆ ಹಚ್ಚಿದ್ದು, ಚಾಲಕನನ್ನು ಈಗ ಬಂಧಿಸಲಾಗಿದೆ. ಪೊಲೀಸರು ಹಗಲು-ರಾತ್ರಿ ಅನ್ನದೇ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಾಕಾ ಬಂದಿ ಮಾಡಿ ಬಿಳಿ ಬಣ್ಣದ ಹೂಂಡೈ ಇಯಾನ್ ಕಾರಿಗಾಗಿ ಹುಡುಕಾಟ ನಡೆಸಿದರು.
ಅಚ್ಚರಿ ಎಂದರೆ ಸುಮಾರು 200ಕ್ಕೂ ಹೆಚ್ಚು ವಾಹನಗಳನ್ನು ಪತ್ತೆ ಹಚ್ಚಿ ಅದರ ಮಾಲೀಕರನ್ನು ಕರೆಸಿ ವಿಚಾರಣೆ ನಡೆಸಿದರು. ಅಂತಿಮವಾಗಿ ದುಷ್ಕರ್ಮಿಗಳು ಪ್ರಯಾಣಿಸಿದ್ದ ಬಿಳಿ ಬಣ್ಣದ ಕಾರನ್ನು ಕೊನೆಗೂ ಪತ್ತೆ ಹಚ್ಚಿದ್ದಾರೆ. ಘಟನೆ ಬಗ್ಗೆ ಈಗ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.