ಬೆಂಗಳೂರು, ಫೆ.6- ಯುವ ಕಾಂಗ್ರೆಸ್‍ನ ನಾಯಕತ್ವ ವಿವಾದ ಸುಖಾಂತ್ಯವಾಗಿದ್ದು, ಮೊಹಮ್ಮದ್ ನಲಪಾಡ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಬೆನ್ನಲ್ಲೇ, ನಿರ್ಗಮಿತ ಅಧ್ಯಕ್ಷ ರಕ್ಷಾ ರಾಮಯ್ಯಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ಒಂದೆರಡು ರಾಜ್ಯಗಳ ಉಸ್ತುವಾರಿ ನೀಡುವ ಸಾಧ್ಯತೆಗಳಿವೆ.ಕಳೆದ ವರ್ಷ ಜನವರಿ 10ರಂದು ನಡೆದ ಯುವ ಕಾಂಗ್ರೆಸ್‍ನ ಆನ್‍ಲೈನ್ ಮತದಾನದ ಫಲಿತಾಂಶ ಪ್ರಕಟಗೊಂಡ ಬಳಿಕ ಹಲವು ರೀತಿಯ ಬೆಳವಣಿಗೆಗಳಾಗಿದ್ದವು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿತ ನಲಪಾಡ್ ಹೆಚ್ಚು ಮತಗಳನ್ನು ಗಳಿಸಿದ್ದರು. ಆದರೆ ಮತ ಗಳಿಕೆಯ ಹಿಂದೆ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿಯ ಕೈವಾಡ ಇದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು, ನಲಪಾಡ್ ಮೇಲೆ ಕ್ರಿಮಿನಲ್ ಮೊಕದ್ದಮೆ ಇರುವುದರಿಂದ ಯುವ ಕಾಂಗ್ರೆಸ್ ನಾಯಕತ್ವ ನೀಡಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸಮಿತಿ ನಿರಾಕರಿಸಿತ್ತು, ಮುಂದುವರೆದು ಸ್ಪರ್ಧೆಯಿಂದಲೇ ಅನರ್ಹಗೊಳಿಸಿತ್ತು. ಎರಡನೇ ಸ್ಥಾನ ಪಡೆದಿದ್ದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಅಂದಿನಿಂದಲೂ ಯುವ ಕಾಂಗ್ರೆಸ್ ನಾಯಕತ್ವದ ವಿವಾದ ಬೂದಿ ಮುಚ್ಚಿದ ಕೆಂಡದಂತಿತ್ತು. ಕಳೆದ ವರ್ಷ ಜೂನ್‍ನಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ ಮಧ್ಯ ಪ್ರವೇಶ ಮಾಡಿ ಇಬ್ಬರು ಯುವ ನಾಯಕರಿಗೂ ತಲಾ ಒಂದು ವರ್ಷ ಅಕಾರ ಹಂಚಿಕೆಯ ಸೂತ್ರ ಸಿದ್ಧ ಪಡಿಸಿದ್ದರು. ಇದಕ್ಕೆ ಎರಡು ಕಡೆಯ ಒಪ್ಪಿಗೆ ಇದೆ ಎಂದು ಪ್ರಕಟಣೆಯ ಮೂಲಕ ತಿಳಿಸಲಾಗಿತ್ತು. ಒಪ್ಪಂದದ ಪ್ರಕಾರ ಡಿಸೆಂಬರ್ 31ಕ್ಕೆ ರಕ್ಷಾ ರಾಮಯ್ಯ ತಮ್ಮ ಅಕಾರ ಬಿಟ್ಟು ಕೊಟ್ಟು ನಲಪಾಡ್ ನೂತನ ಅಧ್ಯಕ್ಷರಾಗ ಬೇಕಿತ್ತು.
ಆದರೆ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ರಕ್ಷಾ ರಾಮಯ್ಯರಿಂದ ಸುಲಭವಾಗಿ ಅಕಾರ ಪಡೆದುಕೊಳ್ಳುವುದು ಅಷ್ಟು ಸುಲಭ ಸಾಧ್ಯವಿರಲಿಲ್ಲ. ರಾಜಿ ಸಂಧಾನಗಳು ನಡೆದು ಕೊನೆಗೆ ಫೆಬ್ರವರಿಯ ನಂತರ ಅಕಾರ ಹಸ್ತಾಂತರದ ಸೂತ್ರ ಸಿದ್ಧಪಡಿಸಲಾಗಿದೆ. ಅದರ ಪ್ರಕಾರ ನಲಪಾಡ್ ಈಗಾಗಲೇ ಯುವ ಕಾಂಗ್ರೆಸ್ ಕಚೇರಿಯಲ್ಲಿ ಪೂಜೆ ಮಾಡಿ, ಸಂಘಟನೆ ಕೆಲಸ ಆರಂಭಿಸಿದ್ದಾರೆ. ರಾಜ್ಯ ಪದಾಕಾರಿಗಳ ಸಭೆಯನ್ನು ನಡೆಸಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕತ್ವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸಿ.ಎಂ.ಇಬ್ರಾಹಿಂ ಅವರ ಬಂಡಾಯ ನಲಪಾಡ್‍ಗೆ ವರದಾನವಾಗಿದೆ. ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತರಿಗೆ ಪಕ್ಷದಲ್ಲಿ ಅನ್ಯಾಯವಾಗುತ್ತಿದೆ ಎಂಬ ಕೂಗೆದ್ದಿದ್ದು, ಪಕ್ಷಕ್ಕೆ ಮುಜುಗರವಾಗಿತ್ತು. ಈ ಹಂತದಲ್ಲಿ ನಲಪಾಡ್ ತಮಗೆ ಯುವ ಕಾಂಗ್ರೆಸ್ ನಾಯಕತ್ವ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದರು. ಡಿ.ಕೆ.ಶಿವಕುಮಾರ್ ಕೂಡ ಬೆಂಬಲ ವ್ಯಕ್ತ ಪಡಿಸಿದ್ದರಿಂದ ಸಿದ್ದರಾಮಯ್ಯ ಂದು ಹೆಜ್ಜೆ ಹಿಂದೆ ಸರಿದಿದ್ದಾರೆ. ಸಿ.ಎಂ.ಇಬ್ರಾಹಿಂರಿಂದಾಗಿರುವ ಮುಜುಗರ ತಗ್ಗಿಸಲು ಹಾಗು ಡಿ.ಕೆ.ಶಿವಕುಮಾರ್‍ರೊಂದಿಗೆ ಸಂಘರ್ಷ ಬೇಡ ಎಂಬ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ರಕ್ಷಾ ರಾಮಯ್ಯ ಅವರಿಗೆ ಅಕಾರ ಹಸ್ತಾಂತರಿಸುವಂತೆ ಸೂಚಿಸಿದ್ದಾರೆ.
ಹೈಕಮಾಂಡ್ ಕೂಡ ರಕ್ಷಾ ರಾಮಯ್ಯರನ್ನು ದೆಹಲಿಗೆ ಕರೆಸಿಕೊಂಡಿದ್ದು, ಯುವ ಕಾಂಗ್ರೆಸ್‍ನ ರಾಷ್ಟ್ರೀಯ ಸಂಘಟನೆಗೆ ಬರುವಂತೆ ಸಲಹೆ ನೀಡಿದ್ದಾರೆ. ರಕ್ಷಾ ವಿದ್ಯಾವಂತರಾಗಿದ್ದು, ಭಾಷಾ ಹಿಡಿತವೂ ಚೆನ್ನಾಗಿದೆ. ಹಿಗಾಗಿ ಕೆಲ ರಾಜ್ಯಗಳ ಉಸ್ತುವಾರಿ ವಹಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಒಂದು ವರ್ಷದಿಂದ ಒಳಗೊಳಗೆ ಕುದಿಯುತ್ತಿದ್ದ ವಿವಾದ ತಣ್ಣಗಾಗಿದೆ, ಫೆ.10ರಂದು ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಕಾರ ಸ್ವೀಕರಿಸಲಿದ್ದಾರೆ. ಶೀಘ್ರವೇ ರಕ್ಷಾ ರಾಮಯ್ಯ ಅವರಿಗೂ ಸೂಕ್ತ ಸ್ಥಾನ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
