ಯುವ ಕಾಂಗ್ರೆಸ್‍ ಕಚೇರಿ ಮೊಹಮ್ಮದ್ ನಲಪಾಡ್‍ ವಶಕ್ಕೆ

Social Share

ಬೆಂಗಳೂರು, ಜ.31- ಯುವ ಕಾಂಗ್ರೆಸ್‍  ಅಧ್ಯಕ್ಷರಾಗಿ ಫೆಬ್ರವರಿ 10ರಂದು ಅಧಿಕಾರ ಸ್ವೀಕಾರ ಮಾಡುವುದಾಗಿ ಮೊಹಮ್ಮದ್ ನಲಪಾಡ್‍ ತಿಳಿಸಿದ್ದಾರೆ. ಇಂದು ರೇಸ್‍ ಕೋರ್ಸ್‍ ರಸ್ತೆಯ ಕಾಂಗ್ರೆಸ್‍ ಭವನದಲ್ಲಿ ಯುವ ಕಾಂಗ್ರೆಸ್‍ ಕಚೇರಿಯನ್ನು ವಶಕ್ಕೆ ಪಡೆದುಕೊಂಡ ನಲಪಾಡ್ ಪೂಜೆ ಸಲ್ಲಿಸಿದ್ದಾರೆ. ನಾಳೆ ಯುವ ಕಾಂಗ್ರೆಸ್‍ ನ ಪದಾಧಿಕಾರಿಗಳ ಸಭೆ ನಡೆಸುವುದಾಗಿ ಈ ಸಂಜೆಗೆ ತಿಳಿಸಿದ್ದಾರೆ.
ವಿದ್ಯುಕ್ತವಾಗಿ ಫೆಬ್ರವರಿ 10ರಂದು ಯುವ ಕಾಂಗ್ರೆಸ್‍ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದಾಗಿ ಸ್ಪಷ್ಟ ಪಡಿಸಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ನಡೆದ ಯುವ ಕಾಂಗ್ರೆಸ್‍ ಚುನಾವಣೆಯಲ್ಲಿ ನಲಪಾಡ್‍ ಅತ್ಯಧಿಕ ಮತಗಳನ್ನು ಪಡೆದಿದ್ದರು. ಆದರೆ ಅವರ ಮೇಲೆ ಕ್ರಿಮಿನಲ್‍ ಪ್ರಕರಣ ದಾಖಲಾಗಿದೆ ಎಂಬ ಕಾರಣಕ್ಕೆ ನಲಪಾಡ್ ರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು.
ಎರಡನೇ ಸ್ಥಾನ ಪಡೆದಿದ್ದ ಮಾಜಿ ಸಚಿವ ಎಂ.ಆರ್‍.ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್‍ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಸುಮಾರು ಎಂಟು ತಿಂಗಳಿನಿಂದ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್‍ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು.
ಡಿ.ಕೆ.ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದ ಮೊಹಮ್ಮದ್ ನಲಪಾಡ್ ರಿಗೆ ಉಳಿದ ಅವಧಿಯನ್ನು ಬಿಟ್ಟುಕೊಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್‍ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಮಧ್ಯ ಪ್ರವೇಶ ಮಾಡಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‍ ಅವರೊಂದಿಗೆ ಮಾತುಕತೆ ನಡೆಸಿ ಇಬ್ಬರು ಯುವಕರ ನಡುವೆ ಅಧಿಕಾರ ಹಂಚಿಕೆ ಸೂತ್ರ ಸಿದ್ಧಪಡಿಸಿದ್ದರು.
ಅದರ ಪ್ರಕಾರ ಡಿಸೆಂಬರ್ 31ಕ್ಕೆ ರಕ್ಷಾ ರಾಮಯ್ಯ ಅವರ ಅವಧಿ ಪೂರ್ಣಗೊಳ್ಳಬೇಕಿತ್ತು. ಸರಿ ಸುಮಾರು ಒಂದು ವರ್ಷ ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಕಾರಣಕ್ಕೆ ಫೆಬ್ರವರಿವರೆಗೂ ಅವಧಿ ವಿಸ್ತರಣೆಯಾಗಿತ್ತು. ಈಗ ಫೆಬ್ರವರಿ 10ಕ್ಕೆ ಅಧಿಕಾರ ವಹಿಸಿಕೊಳ್ಳಲು ನಲಪಾಡ್‍ ಸಿದ್ಧತೆ ನಡೆಸಿದ್ದಾರೆ. ಮೊದಲ ಹಂತದಲ್ಲಿ ಇಂದು ಕಚೇರಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

Articles You Might Like

Share This Article