ಬೆಂಗಳೂರು, ಜ.29- ಜನಸಾಮಾನ್ಯರಿಗೆ ನಿವೇಶನ ಕೊಡಿಸುವುದಾಗಿ ಹಾಗೂ ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಸಿರುವ ಅಮೃತಹಳ್ಳಿ ಠಾಣೆಯ ಪೊಲೀಸರು, ಅವರ ಹಲವು ಹೈನಾತಿ ಕೃತ್ಯಗಳನ್ನು ಬಯಲಿಗೆ ಎಳೆದಿದ್ದಾರೆ.
ತಮಿಳುನಾಡು ರಾಜ್ಯದ ವೆಲ್ಲೂರು ಜಿಲ್ಲೆಯ ಎಂ.ನಟರಾಜ್ ಅಲಿಯಾಸ್ ರಾಜರೆಡ್ಡಿ, ಅಲಿಯಾಸ್ ವಿಜಯ್, ಅಲಿಯಾಸ್ ಸೂರ್ಯ ರೆಡ್ಡಿ (50), ಕೃಷ್ಣಗಿರಿ ಜಿಲ್ಲೆಯ ಬಾಲಾಜಿ ಅಲಿಯಾಸ್ ಬಾಲಾ (41), ಬೆಂಗಳೂರಿನ ಬಾಣಸವಾಡಿಯ ರಾಕೇಶ್ (29), ಚೆನ್ನಸಂದ್ರದ ಜಿ.ವೆಂಕಟೇಶ್ (50) ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 5.85 ಲಕ್ಷ ರೂ.ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಸಂಗೀತಾ ಎಂಬುವರಿಗೆ ನಿವೇಶನ ಕೊಡಿಸುವುದಾಗಿ ಹೇಳಿ ಅಕ್ಟೋಬರ್ 25ರಂದು ಅವರ ಚಾಲಕ ಅವಲು ಕೃಷ್ಣಯ್ಯ ಮೂಲಕ ಕಾರಿನಲ್ಲಿ 10 ಲಕ್ಷ ರೂ ಹಣವನ್ನು ತರಿಸಿಕೊಳ್ಳಲಾಗಿತ್ತು. ಚಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡುವುದಾಗಿ ಬೆದರಿಸಿ ಅವರ ಬಳಿ ಇದ್ದ 10 ಲಕ್ಷ ರೂಪಾಯಿಗಳನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದರು. ಪ್ರಕರಣ ದಾಖಲಿಸಿದ ಅಮೃತಹಳ್ಳಿ ಪೊಲೀಸರು ತನಿಖೆ ಆರಂಭಿಸಿದರು. ಆರೋಪಿಗಳು ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಇರುವ ಮಾಹಿತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿಗಳು ಬಳಸುತ್ತಿದ್ದ ವಿವಿಧ ಕಂಪೆನಿಯ 14 ಮೊಬೈಲ್‍ಗಳು, ನಕಲಿ ಬಂಗಾರದ ನಾಲ್ಕು ಉಂಗುರಗಳು, 10 ನಕಲಿ ಬಂಗಾರದ ಬಿಸ್ಕತ್‍ಗಳು, ಮೂರು ಚೈನ್‍ಗಳು, ರುದ್ರಾಕ್ಷಿ ಸರ, ಒಂದು ಬ್ರಾಸ್‍ಲೇಟ್, 45 ಸಾವಿರ ರೂಪಾಯಿ ಬೆಲೆ ಬಾಳುವ ಎಂಟು ಗ್ರಾಮ್ ತೂಕದ ಎರಡು ಉಂಗುರುಗಳು, ಒಂದು ಬಿಳಿ ಬಣ್ಣದ ಟಾಟಾ ಜೆಸ್ಟ್ ಕಾರು, ಒಂದು ಚಾಕು, ಒಂದು ಹೋಂಡಾ ಆಕ್ಟೀವಾ ಸ್ಕೂಟರ್, ಇನೋವಾ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕೃತ್ಯಕ್ಕೆ ಪ್ರೆಸ್ ಮತ್ತು ಹ್ಯೂಮನ್ ರೈಟ್ಸ್ ಎಂಬ ಲೆಬಲ್ ಅನ್ನು ಅಕ್ರಮವಾಗಿ ಬಳಕೆ ಮಾಡುತ್ತಿದ್ದರು. ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದರು. ತೀವ್ರ ತಪಾಸಣೆ ಮಾಡಿದಾಗ ಸುಮಾರು 20 ಕೋಟಿ ರೂ. ಎಂದು ಜನರಿಗೆ ತಮ್ಮ ಮೊಬೈಲ್‍ಗಳಲ್ಲಿ ವಿಡಿಯೋ ಹಾಗೂ ಪೋಟೋಗಳನ್ನು ತೋರಿಸಿ ನಂಬಿಸುತ್ತಿದ್ದ ಐದು ಬ್ಯಾಗ್‍ಗಳಲ್ಲಿದ್ದ ಚಿಲ್ಡ್ರನ್ ಬ್ಯಾಂಕ್ ನೋಟುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಪ್ರಮುಖ ಆರೋಪಿ ನಟರಾಜನ್ ವಿರುದ್ಧ ಈಗಾಗಲೇ ಹೊಸಕೋಟೆ, ತಮಿಳುನಾಡಿನಲ್ಲಿ ವಂಚನೆ ಮತ್ತು ಕೊಲೆ ಪ್ರಕರಣಗಳು ದಾಖಲಾಗಿವೆ. ಕೊಲೆ ಪ್ರಕರಣದಲ್ಲಿ ಶಿಕ್ಷೆಯೂ ಆಗಿದ್ದು, ತಲೆ ಮರೆಸಿಕೊಂಡು ಓಡಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವೆಂಕಟೇಶ್ ವಿರುದ್ಧ ಶ್ರೀರಾಮಪುರಂ, ಯಶವಂತಪುರ ಮತ್ತು ರಾಮಮೂರ್ತಿ ನಗರ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ.ಡಿಸಿಪಿ ಅನೂಪ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಪಿಗೆ ಹಳ್ಳಿ ಎಸಿಪಿ ಟಿ.ಆರ್.ರಂಗಪ್ಪ ನೇತೃತ್ವದಲ್ಲಿ ಅಮೃತಹಳ್ಳಿ ಠಾಣೆಯ ಇನ್ಸ್‍ಪೆಕ್ಟರ್ ಗುರುಪ್ರಸಾದ್, ಪಿಎಸ್‍ಐಗಳಾದ ಪ್ರಕಾಶ್ ಪಿ. ಕಣಜೇರ್, ಲಕ್ಷ್ಮೀಕಾಂತ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
