ಬೆಂಗಳೂರು,ಜು.30-ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಮಂಕಿಪಾಕ್ಸ್ ಇದೀಗ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಮಂಕಿಪಾಕ್ಸ್ ಗುಣಲಕ್ಷಣ ಇರುವ ವಿದೇಶಿ ಪ್ರಜೆಯನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದೆ.ಆಫ್ರಿಕಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾP್ಸï ಗುಣ ಲಕ್ಷಣಗಳು ಪತ್ತೆಯಾಗಿರುವುದರಿಂದ ಆತಂಕ ಎದುರಾಗಿದೆ.
ಶಂಕೀತ ರೋಗಿಯನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ.ಕಳೆದ ಜುಲೈ 4ರಂದು ಇಥಿಯೋಪಿಯದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಮಂಕಿ ಪಾಕ್ಸ್ ಗುಣಲಕ್ಷಣಗಳು ಕಂಡು ಬಂದಿದೆ.
ಕಿಡ್ನಿ ಕಸಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದ ಆಫ್ರಿಕಾ ಮೂಲದ ವ್ಯಕ್ತಿಗೆ ಮೈಮೇಲೆ ತುರಿಕೆ ಹಾಗೂ ದೇಹದ ಕೆಲ ಭಾಗದಲ್ಲಿ ಸಣ್ಣ ಗುಳ್ಳೆಗಳು ಕಂಡು ಬಂದಿತ್ತು.ಮಂಕಿಪಾಕ್ಸ್ ಲಕ್ಷಣ ಕಂಡು ಬಂದಿದ್ದ ಶಂಕಿತನ ಸ್ಯಾಂಪಲ್ಸï ಅನ್ನು ಪುಣೆಯ ವಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಮೊನ್ನೆ ರಾತ್ರಿ ವ್ಯಕ್ತಿಯ ಎಡ ಗೈಯಲ್ಲಿ ತುರಿಕೆ ಕಾಣಿಸಿಕೊಂಡಿದೆ. ಕ್ರಮೇಣ ತುರಿಕೆ ಇಡೀ ದೇಹಕ್ಕೆ ವ್ಯಾಪಿಸಿದೆ. ಎಡಗಾಲಿನ ತೊಡೆಯ ಭಾಗದಲ್ಲಿ ಗುಳ್ಳೆಗಳು ಕಾಣಿಸಿಕೊಂಡಿರುವುದರಿಂದ ಆತನಿಗೆ ಮಂಕಿಪಾಕ್ಸ್ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ.
ಶಂಕಿತ ರೋಗಿ ಆರೋಗ್ಯ ಹದಗೆಟ್ಟಿದ್ದು, ಈತ ತನ್ನ ಕಿಡ್ನಿ ಕಸಿ ಚಿಕಿತ್ಸೆಗಾಗಿ ಹಲವಾರು ದೇಶಗಳಿಗೆ ಪ್ರಯಾಣ ಬೆಳೆಸಿದ್ದ.ಅಂತಿಮವಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಕಸಿಗಾಗಿ ಇಲ್ಲಿಗೆ ಬಂದಿದ್ದ .ಶಂಕಿತ ವ್ಯಕ್ತಿಯ ಜೊತೆ ಬಂದಿದ್ದ ಆತನ ಸಹೋದರ ಹಾಗೂ ಸಹೋದರಿ ಮೇಲೂ ತೀವ್ರ ನಿಗಾ ಇಡಲಾಗಿದೆ.
ಒಂದು ವೇಳೆ ಆಫ್ರಿಕಾ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಇರುವುದು ಖಚಿತಪಟ್ಟರೆ ನಗರದಲ್ಲೂ ಆತಂಕ ಎದುರಾಗುವುದು ಖಚಿತ.ಕೆಲ ದಿನಗಳ ಹಿಂದೆ ಯುನೈಟೆಡ್ ಕಿಂಗ್‍ಡಮ್‍ಗೆ ಪ್ರಯಾಣ ಬೆಳೆಸಿ ವಾಪಸ್ಸಾಗಿದ್ದ ಬೆಂಗಳೂರು ಮೂಲದ ವ್ಯಕ್ತಿಗೂ ಮಂಕಿಪಾಕ್ಸ್ ರೋಗ ಲಕ್ಷಣಗಳು ಕಂಡು ಬಂದಿತ್ತು.ಕೂಡಲೇ ಆತನ ಸ್ಯಾಂಪಲ್ ಅನ್ನು ಪುಣೆಯ ಎನ್‍ಐವಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಆದರೆ, ಆತನ ವರದಿ ನೆಗಿಟಿವ್ ಬಂದಿದ್ದರಿಂದ ಆತಂಕ ದೂರವಾಗಿತ್ತು.
ರಾಜ್ಯದಲ್ಲಿ ಇದೀಗ ಎರಡನೇ ವ್ಯಕ್ತಿಗೆ ಮಂಕಿಪಾಕ್ಸ್ ರೋಗ ಲಕ್ಷಣಗಳು ಕಂಡು ಬಂದಿರುವುದು ಪತ್ತೆಯಾಗಿರುವುದರಿಂದ ರಾಜ್ಯದೆಲ್ಲೆಡೆ ಎಚ್ಚರ ವಹಿಸಲಾಗಿದೆ. ಖಾಸಗಿ ಆಸ್ಪತ್ರೆಯವರಿಗೆ ರೋಗ ಲಕ್ಷಣ ಕಂಡು ಬಂದ ವ್ಯಕ್ತಿಗಳ ಮಾದರಿ ಸಂಗ್ರಹಿಸಿ ಕೂಡಲೇ ಎನ್‍ಐವಿ ಪ್ರಯೋಗಾಲಯಕ್ಕೆ ರವಾನಿಸಬೇಕು ಮಾತ್ರವಲ್ಲ ಈ ವಿಚಾರವನ್ನು ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ ಎಂದು ರಂದೀಪ್ ತಿಳಿಸಿದ್ದಾರೆ.