ಬೆಂಗಳೂರು,ಜು.26- ರಾಷ್ಟ್ರ ರಾಜಧಾನಿ ನವ ದೆಹಲಿ ಹಾಗೂ ಕೇರಳ ಸೇರಿದಂತೆ ಮತ್ತಿತರ ಕಡೆ ಮಂಕಿ ಪಾಕ್ಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಸರ್ಕಾರ ಜಿಲ್ಲಾಸ್ಪತ್ರೆಗಳಿಗೆ ಸೂಚನೆ ನೀಡಿದೆ. ಎರಡು ದಿನಗಳ ಹಿಂದೆ ದೆಹಲಿಯಲ್ಲಿ ವಿದೇಶಕ್ಕೆ ಹೋಗದ ವ್ಯಕ್ತಿಗೂ ಮಂಕಿಪಾಕ್ಸ್ ಕಾಣಿಸಿಕೊಂಡಿತ್ತು. ಅಲ್ಲದೆ ವಿಶ್ವಸಂಸ್ಥೆಯು ಇದನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿತ್ತು.
ಹೀಗಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದ ಗಡಿಭಾಗಗಳ ಚೆಕ್‍ಫೋಸ್ಟ್‍ಗಳು, ವಿಮಾನ ನಿಲ್ದಾಣ, ಬಂದರು ಸೇರಿದಂತೆ ಮತ್ತಿತರ ಕಡೆ ಬಿಗಿ ಭದ್ರತೆ ಕೈಗೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಗೃಹ ಇಲಾಖೆಗೆ ಸೂಚನೆ ನೀಡಿದೆ.
ತಜ್ಞರ ಸಲಹೆಯಂತೆ ಮುನ್ನಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯದ ಎಲ್ಲ ಜಿಲ್ಲಾ ವೈದ್ಯಾಧಿಕಾರಿಗಳು,
ಸಿಎಚ್‍ಒ, ಜಿಲ್ಲಾ ಆಸ್ಪತ್ರೆಗಳ ನಿರ್ದೇಶಕರ ಜೊತೆಗೆ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸಭೆ ನಡೆಸಿದ್ದರು. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೂ ಎರಡು ಹಾಸಿಗೆಗಳ ಪ್ರತ್ಯೇಕ ವಾರ್ಡ್ ಮೀಸಲಿರಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಸಿವಿ ರಾಮನ್ ಆಸ್ಪತ್ರೆ ಹಾಗೂ ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಮಂಕಿಪಾಕ್ಸ್ ವಾರ್ಡ್ ರೂಪಿಸಲು ಸಿದ್ಧತೆ ನಡೆಯುತ್ತಿದೆ. ಸಂಪೂರ್ಣ ಐಸೋಲೇಶನ್ ವಾರ್ಡ್ ಸಿದ್ದಪಡಿಸಲಾಗಿದೆ.
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ, ಕೇರಳಕ್ಕೆ ಹೊಂದಿಕೊಂಡಿರುವ ಚಾಮರಾಜನಗರ, ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಕೋಲಾರ, ತೆಲಂಗಾಣಕ್ಕೆ ಸಂಪರ್ಕವಿರುವ ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ ಸೇರಿದಂತೆ ಮತ್ತಿತರ ಕಡೆ ಬಿಗಿ ಭದ್ರತೆಯನ್ನು ತೆಗೆದುಕೊಳ್ಳಲಾಗಿದೆ.
ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ಚೆಕ್‍ಫೋಸ್ಟ್‍ಗಳಲ್ಲಿ ತಪಾಸಣೆ ನಡೆಸಿ ಒಳ ಬಿಡಬೇಕೆಂದು ಫೋಲೀಸರಿಗೂ ಸೂಚಿಸಲಾಗಿದೆ. ಹೀಗಾಗಿ ಬಹುತೇಕ ಎಲ್ಲ ಚೆಕ್‍ಫೋಸ್ಟ್‍ಗಳಲ್ಲಿ ನಿನ್ನೆಯಿಂದಲೇ ಬಿಗಿ ತಪಾಸಣೆ ಕೈಗೊಳ್ಳಲಾಗಿದೆ.
ಯಾವುದೇ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡರೆ ತಕ್ಷಣವೇ ಅಂಥವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಬೇಕೆಂದು ಜಿಲ್ಲಾ ಸರ್ಜನ್‍ಗಳಿಗೂ ಆರೋಗ್ಯ ಮತ್ತು ಕುಟುಂಬ ಇಲಾಖೆ ನಿರ್ದೇಶನ ನೀಡಿದೆ.
ವಿಮಾನ ನಿಲ್ದಾಣಗಳಲ್ಲೂ ತಪಾಸಣೆ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರಿನ ಬಜ್ಪೆ, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮೈಸೂರು ವಿಮಾನ ನಿಲ್ದಾಣಗಳಲ್ಲೂ ವಿದೇಶದಿಂದ ಬರುವ ಪ್ರಯಾಣಿಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಕಳೆದ ಎರಡು ದಿನಗಳಿಂದ ರಾಜ್ಯದ ಪ್ರತಿಯೊಂದು ವಿಮಾನ ನಿಲ್ದಾಣಗಳಲ್ಲೂ ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ನಡೆಸಿಯೇ ಬಿಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ದುಬೈ, ಯುಎಇ, ಆಫ್ರಿಕಾ ದೇಶಗಳಿಂದ ಬರುತ್ತಿರುವ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ.
ಒಂದು ವೇಳೆ ಯಾವುದಾದರೂ ವ್ಯಕ್ತಿಗೆ ಜ್ವರ, ಕೆಮ್ಮು, ನೆಗಡಿ, ಶೀತ, ತಲೆ ಸುತ್ತು ಕಂಡುಬಂದರೆ ಅವರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತದೆ. ಕಳೆದ ಒಂದು ವಾರದಿಂದ ವಿಶ್ವ ಸಂಸ್ಥೆ ಗುರುತಿಸಿರುವ ರಾಷ್ಟ್ರಗಳಿಂದ ರಾಜ್ಯಕ್ಕೆ ಆಗಮಿಸಿರುವ ಪ್ರಯಾಣಿಕರ ಪಟ್ಟಿಯನ್ನು ಸಹ ಪಡೆಯಲಾಗಿದೆ.
ಇದರ ಜೊತೆಗೆ ಮಂಗಳೂರು, ಕಾರವಾರ, ಉಡುಪಿ, ಮಲ್ಪೆ, ಗೋಕರ್ಣ ಸೇರಿದಂತೆ ಮತ್ತಿತರ ಬಂದರುಗಳಲ್ಲೂ ಸಹ ಬಿಗಿಯಾದ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಪ್ರವಾಸದ ಇತಿಹಾಸ ಇಲ್ಲದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ಪತ್ತೆಯಾಗಿತ್ತು.
ನೆರೆಯ ಕೇರಳದಲ್ಲಿ ಮೂರು ಮಂಕಿಪಾಕ್ಸ್ ಸೋಂಕಿನ ಹಲವು ಪ್ರಕರಣಗಳು ವರದಿಯಾಗಿದ್ದರಿಂದ್ದ ಗಡಿಯಲ್ಲಿ ಕರ್ನಾಟಕ ಕಟ್ಟೆಚ್ಚರ ವಹಿಸಲಾಗಿತ್ತು. ನೂರಾರು ದೇಶಗಳಲ್ಲಿ ಈಗಾಗಲೇ ಸಾವಿರಾರು ಮಂದಿಯಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ. ಪ್ರಕರಣ ಪತ್ತೆ ಹಿನ್ನಲೆಯಲ್ಲಿ ತಜ್ಞರು ಎಚ್ಚರಿಕೆಯಿಂದ ಇರುವಂತೆ ನೀಡಿದ್ದಾರೆ. ಭಾರತದಲ್ಲಿ ಪತ್ತೆಯಾದ 4ನೇ ಮಂಕಿಪಾಕ್ಸ್ ಪ್ರಕರಣದ ರೋಗಿಗೆ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಹೀಗಾಗಿ ದೇಶದಲ್ಲಿಯೂ ಆತಂಕ ವ್ಯಕ್ತವಾಗಿದೆ.