ರಾಜ್ಯದಲ್ಲಿ ಮಂಕಿಪಾಕ್ಸ್ ಇಲ್ಲ, ಭಯ ಬೇಡ : ಸಚಿವ ಸುಧಾಕರ್

Social Share

ಬೆಂಗಳೂರು, ಆ.6- ರಾಜ್ಯದಲ್ಲಿ ಈವರೆಗೆ ಮಂಕಿ ಫಾಕ್ಸ್ ಪ್ರಕರಣ ಕಂಡುಬಂದಿಲ್ಲ. ಆರಂಭದಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
ವಿಶ್ವ ವ್ಯಾಸ್ಕ್ಯುಲರ್ ದಿನ ಪ್ರಯುಕ್ತ, ವ್ಯಾಸ್ಕ್ಯುಲರ್ ಸರ್ಜನ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ, ಟೌನ್‍ಹಾಲ್‍ನಿಂದ ಕಂಠೀರವ ಸ್ಟೇಡಿಯಂವರೆಗಿನ ಜಾಗೃತಿ ನಡಿಗೆ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡರು.

ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಮಂಕಿ ಫಾಕ್ಸ್ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ರಾಜ್ಯಕ್ಕೆ ಬಂದಾಗ ಮಾರ್ಗಸೂಚಿಯನ್ನು ಪಾಲಿಸಬೇಕು. ಇಥಿಯೋಪಿಯಾದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮಂಕಿ ಫಾಕ್ಸ್ ಇರುವ ಅನುಮಾನದ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅದು ಮಂಕಿ ಫಾಕ್ಸ್ ಅಲ್ಲ, ಸ್ಮಾಲ್ ಫಾಕ್ಸ್ ಎಂದು ದೃಢಪಟ್ಟಿದೆ ಎಂದರು.

ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು 24 ಗಂಟೆಯೂ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರು ಬಗೆಯ ಪಾಳಿಯನ್ನು ನಿಗದಿ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲೂ ಈ ಪ್ರಕರಣ ಕಂಡುಬಂದರೂ, ರಾಜ್ಯದಲ್ಲಿ ಈವರೆಗೆ ಪ್ರಕರಣ ಕಂಡುಬಂದಿಲ್ಲ. ಸ್ಕಿನ್ ರಾಶಸ್ ಸೇರಿದಂತೆ ಹಲವಾರು ಲಕ್ಷಣಗಳಿಂದ ಮಂಕಿ ಫಾಕ್ಸ್ ಗೊತ್ತಾಗುತ್ತದೆ. ಆದರೂ ಕೋವಿಡ್‍ನಂತೆಯೇ ಇದು ಕೂಡ ಮೂರು ನಾಲ್ಕು ದಿನಗಳಾದ ನಂತರ ಪತ್ತೆಯಾಗುತ್ತದೆ. ಇದು ಒಂದು ಚಿಂತಿಸುವ ವಿಷಯ ಎಂದರು.

ಅರಿವು ಅಗತ್ಯ: ದೇಶದಲ್ಲಿ ವ್ಯಾಸ್ಕ್ಯುಲರ್ ತಜ್ಞರು ಬಹಳ ಕಡಿಮೆ ಇದ್ದಾರೆ. ಈ ಆರೋಗ್ಯದ ಸಮಸ್ಯೆ ಬಗ್ಗೆ ನಗರ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ವ್ಯಾಸ್ಕ್ಯುಲರ್ ಸಮಸ್ಯೆಗಳು ಬೇರೆ ಅನಾರೋಗ್ಯಕ್ಕೂ ದಾರಿ ಮಾಡಿಕೊಡುತ್ತವೆ. ಯುವಜನರಲ್ಲಿ ಹಾಗೂ ವೃತ್ತಿಪರರಿಗೆ ಈ ವಿಚಾರದಲ್ಲಿ ನೆರವಾಗಬೇಕಿದೆ.

ಟ್ರಾಫಿಕ್ ಪೊಲೀಸರು ಸಾಮಾನ್ಯ ಜನರಿಗಿಂತ ಹೆಚ್ಚು ಕಾಲ ನಿಂತುಕೊಳ್ಳುತ್ತಾರೆ. ಹಾಗೆಯೇ ಶಿಕ್ಷಕರು, ಸರ್ಜನ್‍ಗಳು ಮತ್ತಿತರರು ಕೂಡ ಹೆಚ್ಚು ಸಮಯ ನಿಂತುಕೊಳ್ಳುತ್ತಾರೆ. ಇದರಿಂದಾಗಿ ವ್ಯಾಸ್ಕ್ಯುಲರ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜಗತ್ತಿನಲ್ಲಿ ಪ್ರತಿ 6 ಸೆಕೆಂಡ್‍ಗೆ ಒಬ್ಬ ವ್ಯಕ್ತಿ ಕಾಲನ್ನು ಕಳೆದುಕೊಳ್ಳುವ ಸ್ಥಿತಿ ಇದೆ ಎಂದು ಅಂದಾಜಿಸಲಾಗಿದೆ. ರಕ್ತನಾಳದ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಲಘು ವ್ಯಾಯಾಮವನ್ನು ಮಾಡುವಂತೆ ಎಲ್ಲರಿಗೂ ಉತ್ತೇಜಿಸಬೇಕು. ವಿಶೇಷವಾಗಿ ಮಧುಮೇಹಿಗಳು ಈ ಬಗ್ಗೆ ಗಮನಹರಿಸಬೇಕು ಎಂದರು.

Articles You Might Like

Share This Article