ಮಂಕಿಪಾಕ್ಸ್ ಬಂದಿದ್ದ ಕೇರಳದ ವ್ಯಕ್ತಿ ಸಾವು, ಮತ್ತಷ್ಟು ಹೆಚ್ಚಿದ ಆತಂಕ

Social Share

ತ್ರಿಶೂರ್ ಆ.1-ಕೇರಳದಲ್ಲಿ ಮಂಕಿಪಾಕ್ಸ್‍ಗೆ ವಿದೇಶದಿಂದ ಬಂದ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆತಂಕ ಶುರುವಾಗಿದೆ. ತ್ರಿಶೂರ್ ಪುನ್ನಿಯೂರ್ ಮೂಲದ 22 ವರ್ಷದ ಯುವಕ, ಯುಎಇಯಿಂದ ಮರಳಿದ ಕೆಲವೇ ದಿನಗಳಲ್ಲಿ ತ್ರಿಶೂರ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಯುಎಇಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಆತನಿಗೆ ಮಂಕಿಪಾಕ್ಸ್ ವೈರಸ್ ಇರುವಿಕೆಯನ್ನು ದೃಢಪಡಿಸಿತ್ತು. ಆದರೆ ಈಗ ಆತ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ವಿಚಿತ್ರವೆಂದರೆ ಯುವಕನಲ್ಲಿ ಮಂಕಿಪಾಕ್ಸ್ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ. ಆಯಾಸದ ಲಕ್ಷಣಗಳೊಂದಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಶನಿವಾರವಷ್ಟೇ ಅವರ ಸಂಬಂಧಿಕರು ಪರೀಕ್ಷಾ ಫಲಿತಾಂಶವನ್ನು ನೀಡಿದರು. ಮಂಕಿಪಾಕ್ಸ್‍ನಿಂದ ಸಾವಿನ ಪ್ರಮಾಣ ತೀರಾ ಕಡಿಮೆ ಇರುವುದರಿಂದ ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಯುಎಇಯ ರಾಸ್ ಅಲ್-ಖೈಮಾದಲ್ಲಿ ಉದ್ಯೋಗದಲ್ಲಿದ್ದ ಯುವಕ ಜುಲೈ 22 ರಂದು ಕೇರಳದ ಕೋಝಿಕೋಡ್ ವಿಮಾನ ನಿಲ್ದಾಣವನ್ನು ತಲುಪಿದ್ದಾನೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಅವರು ಮನೆಗೆ ತಲುಪಿದ ನಂತರ ಚಟುವಟಿಕೆಯಿಂದಿದ್ದರು.

ಸ್ಥಳೀಯ ಮೈದಾನದಲ್ಲಿ ಫುಟ್ಬಾಲ್ ಸಹ ಆಡುತ್ತಿದ್ದರು. ಜುಲೈ 26 ರಂದು, ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು, ನಂತರ, ಆರೋಗ್ಯ ಪರಿಸ್ಥಿತಿ ಹದಗೆಟ್ಟ ಕಾರಣ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿ, ಅಲ್ಲಿ ಅವರಿಗೆ ಜೀವ ರಕ್ಷಕ ಸಾಧನ ಅಳವಡಿಸಲಾಗಿತ್ತು.

ಕೇರಳಕ್ಕೆ ವಿಮಾನ ಹತ್ತುವ ಮೊದಲು ಯುಎಇಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಭಾರತ ತಲುಪಿದ ನಂತರ ವಿಶ್ರಾಂತಿ ತೆಗೆದುಕೊಳ್ಳುವಂತೆ ತಿಳಿಸಲಾಗಿತ್ತು. ಶನಿವಾರದವರೆಗೂ ಕುಟುಂಬವು ಆರೋಗ್ಯ ಇಲಾಖೆ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿಗೆ ಯುವಕನ ಆರೋಗ್ಯದ ಬಗ್ಗೆ ಯಾವುದೇ ವಿಷಯವನ್ನು ತಿಳಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಶನಿವಾರ ಮಧ್ಯಾಹ್ನ ಯುವಕ ಸಾವನ್ನಪ್ಪಿದ ನಂತರ, ರೋಗ ನಿಯಂತ್ರಣದ ನಿಯಮದ ಪ್ರಕಾರ ಅವನ ಅಂತ್ಯಕ್ರಿಯೆ ನಡೆಸಲಾಯಿತು. ಆತನ ಎಲ್ಲಾ ಪ್ರಾಥಮಿಕ ಸಂಪರ್ಕಗಳ ಮೇಲು ನಿಗಾ ಇರಿಸಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

Articles You Might Like

Share This Article