ಬೆಂಗಳೂರು,ಜು.18- ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮಲೆನಾಡು ಭಾಗದಲ್ಲೂ ಮಳೆ ಮುಂದುವರೆದಿದೆ. ಸದ್ಯಕ್ಕೆ ಮಳೆ ಬಿಡುವ ಕೊಡುವ ಸೂಚನೆಗಳು ಕಂಡುಬರುತ್ತಿಲ್ಲ. ಆದರೆ ಮಳೆಯ ಆರ್ಭಟ ಇಳಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಮಹಾರಾಷ್ಟ್ರ ಭಾಗದಲ್ಲಿ ಟ್ರಪ್ ನಿರ್ಮಾಣವಾಗಿರುವುದರಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ತಗ್ಗಿದ್ದರೂ ಮಳೆ ನಿಲ್ಲುವ ಸೂಚನೆಗಳಿಲ್ಲ.
ಇನ್ನು ಕೆಲ ದಿನ ಹೆಚ್ಚು ಕಡಿಮೆ ಇದೇ ರೀತಿ ಮಳೆ ಮುಂದುವರೆಯಲಿದೆ. ದಕ್ಷಿಣ ಒಳನಾಡು ಸೇರಿದಂತೆ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಆಗಾಗ್ಗೆ ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಕೆಲವಡೆ ಹಗುರದಿಂದ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಮಳೆ ಪ್ರಮಾಣ ಇಳಿಕೆಯಾದರೂ ಕಳೆದ ಮೂರು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ತೇವಾಂಶ ಹೆಚ್ಚಿದ್ದು, ನದಿಗಳಲ್ಲಿ ಪ್ರವಾಹ ಇನ್ನು ಮೂರ್ನಾಲ್ಕು ದಿನ ಮುಂದುವರೆಯಲಿದೆ. ಜಲಾಶಯಗಳ ಒಳಹರಿವು ಪ್ರಮಾಣವು ಇನ್ನು ಮುಂದೆ ಇಳಿಕೆಯಾಗುತ್ತಾ ಹೋಗುತ್ತದೆ ಎಂದು ಅವರು ಹೇಳಿದ್ದಾರೆ.