ಸಂಸತ್‍ನ ಅಧಿವೇಶನದಲ್ಲಿ 24 ಹೊಸ ಮಸೂದೆ ಮಂಡಿಸಲು ಸಿದ್ಧತೆ

Social Share

ನವದೆಹಲಿ,ಜು.16- ಸೋಮವಾರದಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಸಂಸತ್‍ನ ಮುಂಗಾರು ಅಧಿವೇಶನದಲ್ಲಿ ಈ ಬಾರಿ ಆಡಳಿತಾರೂಢ ಬಿಜೆಪಿ ಸರ್ಕಾರ 24 ಹೊಸ ಮಸೂದೆಗಳನ್ನು ಮಂಡಿಸಲು ಮುಂದಾಗಿದೆ.

ಲೋಕಸಭೆ ಮತ್ತು ರಾಜ್ಯಸಭಾ ಸೆಕ್ರೆಟರಿಯೇಟ್ ನೀಡಿದ ಮಾಹಿತಿಯ ಪ್ರಕಾರ, ಇವುಗಳಲ್ಲಿ ಬಹು ರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ 2022, ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳು (ತಿದ್ದುಪಡಿ) ಮಸೂದೆ, ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ ಮತ್ತು ಪತ್ರಿಕಾ ಮತ್ತು ನೋಂದಣಿ ಸೇರಿದಂತೆ ಮಹತ್ವದ ಮಸೂದೆಗಳು ಈ ಅಧಿವೇಶನದಲ್ಲಿ ಮಂಡನೆಯಾಗಲಿದೆ.

ಬಹು ರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ 2022, ಅತ್ಯಂತ ಮಹತ್ವದ ಮಸೂದೆ ಎಂದು ಪರಿಗಣಿಸಲಾಗಿದೆ. ಸಹಕಾರ ಸಚಿವಾಲಯದ ಹೆಚ್ಚುವರಿ ಅಧಿಕಾರ ವಹಿಸಿಕೊಂಡ ನಂತರವೇ ಅಮಿತ್ ಶಾ ಅವರು ಕೆಲಸ ಮಾಡಲು ಪ್ರಾರಂಭಿಸಿದರು. ಮೂಲಗಳ ಪ್ರಕಾರ, ಶೀಘ್ರದಲ್ಲೇ ಈ ಮಸೂದೆಯನ್ನು ಸಂಪುಟದ ಅನುಮೋದನೆಗಾಗಿ ತರಲಾಗುವುದು ಎಂದು ತಿಳಿದುಬಂದಿದೆ.

ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 1500 ಸಹಕಾರಿ ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುವುದು ಮತ್ತು ಅವುಗಳನ್ನು ಸಬಲೀಕರಣಗೊಳಿಸಲು ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಅಧಿಕಾರವನ್ನು ನೀಡುವುದು ಮಸೂದೆಯ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಈ ಸಂಸ್ಥೆಗಳ ಠೇವಣಿದಾರರು ಮತ್ತು ಖಾತೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಮಸೂದೆಯಲ್ಲಿ ನಿಬಂಧನೆಯನ್ನು ಮಾಡಲಾಗಿದೆ.

ಈ ಮಸೂದೆಯ ಮೂಲಕ ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಂತಹ ರಾಜ್ಯಗಳ ದೊಡ್ಡ ಸಹಕಾರಿ ಸಂಸ್ಥೆಗಳನ್ನು ಹೆಚ್ಚು ಪಾರದರ್ಶಕ ಮತ್ತು ಪ್ರಜಾಸತ್ತಾತ್ಮಕವಾಗಿಸುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ಇದಕ್ಕೆ ವಿರೋಧ ಪಕ್ಷಗಳು ಗದ್ದಲ ಎಬ್ಬಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ 2022 ಸಹ ಬಹಳ ಮುಖ್ಯವಾಗಿದೆ ಏಕೆಂದರೆ ಈ ಮಸೂದೆಯ ಮೂಲಕ ಮೊದಲ ಬಾರಿಗೆ ಡಿಜಿಟಲ್ ಮಾಧ್ಯಮವನ್ನು ಮಾಧ್ಯಮದ ಭಾಗವಾಗಿ ಸೇರಿಸಲು ಅವಕಾಶ ಮಾಡಲಾಗಿದೆ. ಹೊಸ ಕಾನೂನು ಮಾಡಲು 1867ರ ಹಳೆಯ ಕಾನೂನನ್ನು ಬದಲಿಸಿ ಹೊಸ ಮಸೂದೆ ತರಲಾಗಿದೆ. ಮಸೂದೆಯಲ್ಲಿ ಡಿಜಿಟಲ್ ಮಾಧ್ಯಮದ ನೋಂದಣಿಗೂ ಅವಕಾಶ ಕಲ್ಪಿಸಲಾಗಿದೆ.

ವಿವಾದಾತ್ಮಕವಾಗಿರುವ ಮತ್ತೊಂದು ಮಸೂದೆಯು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳು (ತಿದ್ದುಪಡಿ) ಮಸೂದೆಯಾಗಿದೆ. ದೇಶದ ಸಂರಕ್ಷಿತ ಪ್ರಾಚೀನ ಸ್ಮಾರಕಗಳ ಸುತ್ತಲಿನ ನಿರ್ಬಂಧಿತ ಪ್ರದೇಶದ ವ್ಯಾಖ್ಯಾನವನ್ನು ತರ್ಕಬದ್ಧಗೊಳಿಸಲು ಮಸೂದೆಯಲ್ಲಿ ನಿಬಂಧನೆಯನ್ನು ಮಾಡಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚು ಪಾರದರ್ಶಕ ಮಾಡಲು ಅನುಕೂಲವಾಗುತ್ತದೆ ಎಂಬುದು ಸರ್ಕಾರದ ವಾದವಾಗಿದೆ.

ಈಗಿನ ಕಾನೂನಿನ ಪ್ರಕಾರ, 100 ಮೀಟರ್ ಸಂರಕ್ಷಿತ ಸ್ಮಾರಕಗಳನ್ನು ನಿರ್ಬಂಧಿತ ಪ್ರದೇಶದಲ್ಲಿ ಇರಿಸಲಾಗುತ್ತದೆ, ಇದರಲ್ಲಿ ಯಾವುದೇ ನಿರ್ಮಾಣ ಕಾರ್ಯವನ್ನು ಅನುಮತಿಸಲಾಗುವುದಿಲ್ಲ.

ಇದಲ್ಲದೇ ತೆಲಂಗಾಣದಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆಗೆ ಮಸೂದೆ ಮಂಡಿಸುವ ಸಾಧ್ಯತೆ ಇದೆ. ರಾಷ್ಟ್ರೀಯ ದಂತ ಆಯೋಗದ ಮಸೂದೆ, ಅರಣ್ಯ ಸಂರಕ್ಷಣಾ (ತಿದ್ದುಪಡಿ) ಮಸೂದೆ ಮತ್ತು 1948ರ ದಂತವೈದ್ಯ ಕಾಯಿದೆಯನ್ನು ರದ್ದುಪಡಿಸುವ ಮೂಲಕ ರಾಷ್ಟ್ರೀಯ ದಂತವೈದ್ಯ ಆಯೋಗವನ್ನು ರಚಿಸುವ ಪ್ರಮುಖ ಮಸೂದೆಗಳು ಇದರಲ್ಲಿ ಸೇರಿವೆ.

Articles You Might Like

Share This Article