7 ದಿನಗಳಿಂದ ಪದೇ ಪದೇ ಮುಂದೂಡಿಕೆಯಾಗುತ್ತಲೇ ಇದೆ ಸಂಸತ್ ಅಧಿವೇಶನ

Social Share

ನವದೆಹಲಿ, ಜು.27- ಕಳೆದ ಏಳು ದಿನಗಳಿಂದ ಆರಂಭವಾಗಿರುವ ಸಂಸತ್ ಅಧಿವೇಶನ ಯಾವುದೇ ಫಲಪ್ರದ ಚರ್ಚೆಯಾಗದೆ ಪದೇ ಪದೇ ಮುಂದೂಡಿಕೆಯಾಗುತ್ತಿದ್ದು, ಇಂದು ಕೂಡ ಮಧ್ಯಾಹ್ನದವರೆಗೂ ಯಾವುದೇ ಕಲಾಪ ನಡೆಯದೆ ಸಮಯ ವ್ಯರ್ಥವಾಗಿದೆ.

ಜುಲೈ 18 ರಿಂದ ಆರಂಭವಾಗಿರುವ ಕಲಾಪದಲ್ಲಿ ಈವರೆಗೂ 19 ಮಂದಿ ರಾಜ್ಯಸಭೆ ಸದಸ್ಯರು, ನಾಲ್ವರು ಲೋಕಸಭೆ ಸಂಸದರನ್ನು ಅಮಾನತುಗೊಳಿಸಲಾಗಿದೆ. ಬೆಲೆ ಏರಿಕೆ ಮತ್ತು ಆಹಾರ ಪದಾರ್ಥಗಳ ಮೇಲೆ ಜಿಎಸ್‍ಟಿ ವಿಧಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿದ್ದು, ಗದ್ದಲ-ಕೋಲಾಹಲ ನಿರ್ಮಿಸಿವೆ. ಇದಕ್ಕಾಗಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಒಟ್ಟು 23 ಸದಸ್ಯರನ್ನು ಉಭಯ ಸದನಗಳ ಸಭಾಧ್ಯಕ್ಷರುಗಳು ಅಮಾನತುಗೊಳಿಸಿದ್ದಾರೆ.

ರಾಜ್ಯಸಭೆ: ಭೋಜನ ವಿರಾಮಕ್ಕೂ ಮೊದಲು ಮೇಲ್ಮನೆ ಕಲಾಪ ಮೂರು ಬಾರಿ ಮುಂದೂಡಿಕೆಯಾಗಿದೆ. ಇಂದು ಆಮ್ ಆದ್ಮಿ ಪಕ್ಷದ ಸದಸ್ಯ ಸಂಜಯ್‍ಸಿಂಗ್ ಅವರನ್ನು ಒಂದು ವಾರಕಾಲ ಅಮಾನತುಗೊಳಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಕಲಾಪ ಸಮಾವೇಶಗೊಂಡಾಗ ಪ್ರಶ್ನೋತ್ತರ ಆರಂಭವಾಯಿತು. ಆದರೆ, ಪ್ರತಿಪಕ್ಷಗಳ ಸದಸ್ಯರು ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಾಗ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು.

12 ಗಂಟೆಗೆ ಮತ್ತೆ ಸದನ ಸಮಾವೇಶಗೊಂಡಾಗ ನಿನ್ನೆ ಕಲಾಪದಲ್ಲಿ ಗದ್ದಲ ಮಾಡಿದ್ದ ಸಂಜಯ್‍ಸಿಂಗ್ ಅವರ ಹೆಸರನ್ನು ಡೆಪ್ಯುಟಿ ಸ್ಪೀಕರ್ ಹರಿವಂಶ ಅವರು ನಿಯಮ 256ರಡಿ ಉಲ್ಲೇಖಿಸಿದರು. ಬಳಿಕ ಸದಸ್ಯರ ವಿರುದ್ಧ ಸಂಸದೀಯ ವ್ಯವಹಾರಗಳ ಸಚಿವ ವಿ.ಮುರಾಲ್ ಮುರಳೀಧರನ್ ಅವರ ಅಮಾನತು ಪ್ರಕ್ರಿಯೆಗೆ ಪ್ರಸ್ತಾವನೆ ಮಂಡಿಸಿದರು.

ಧ್ವನಿಮತದ ಮೂಲಕ ಇದು ಅಂಗೀಕಾರಗೊಂಡಿತ್ತು. ಈ ವೇಳೆ ವಿಪಕ್ಷಗಳ ಸದಸ್ಯರು ಏರಿದ ಧ್ವನಿಯಲ್ಲಿ ಘೋಷಣೆ ಕೂಗಿ ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು. ಡೆಪ್ಯೂಟಿ ಸ್ಪೀಕರ್ ಅವರು ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ ಎಂದು ರೂಲಿಂಗ್ ನೀಡಿ ಮತ್ತೆ 15 ನಿಮಿಷ ಕಲಾಪ ಮುಂದೂಡಿದರು. ಮತ್ತೊಮ್ಮೆ ಸಮಾವೇಶಗೊಂಡಾಗ ಸಂಜಯ್‍ಸಿಂಗ್ ಬಾವಿಯಲ್ಲಿ ಧರಣಿ ನಡೆಸುತ್ತಿದ್ದರು. ಅವರಿಗೆ ಸದನ ಬಿಟ್ಟು ಹೊರಹೋಗಲು ತಾಕೀತು ಮಾಡಲಾಯಿತು.

ಈ ವೇಳೆ ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳ ಸದಸ್ಯರು ಬಾವಿಗಿಳಿದು ಧರಣಿ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಡೆಪ್ಯೂಟಿ ಸ್ಪೀಕರ್ ಅವರು ಮಧ್ಯಾಹ್ನ 2 ಗಂಟೆವರೆಗೂ ಕಲಾಪ ಮುಂದೂಡಿದರು. ಪ್ರತಿಪಕ್ಷಗಳು ಸದಸ್ಯರ ಅಮಾನತನ್ನು ನಿಯಮ ಬಾಹಿರ ಎಂದು ಟೀಕಿಸಿವೆ.

ಗುಜರಾತ್‍ನಲ್ಲಿ ನಕಲಿ ಮದ್ಯದ ದುರಂತ ಘಟನೆ ಚರ್ಚೆಗೆ ಸಂಜಯ್‍ಸಿಂಗ್ ಅವರು ಅವಕಾಶ ಕೇಳಿದರು. ನಿನ್ನೆ ನಡೆದ ಈ ಕಲಾಪದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಅವರು ಘೋಷಣೆ ಕೂಗಿ ಕಾಗದ ಪತ್ರಗಳನ್ನು ಹರಿದು ಸಭಾಪತಿಯವರ ಪೀಠದತ್ತ ತೂರಿದರು. ಬೆಲೆ ಏರಿಕೆ ವಿರುದ್ಧ ಗಲಾಟೆ ನಡೆಸಿದ ಟಿಎಂಸಿ, ಡಿಎಂಕೆ, ಸಿಪಿಐ, ಕಾಂಗ್ರೆಸ್ ಸೇರಿದಂತೆ ಹಲವು ಸದಸ್ಯರ ವಿರುದ್ಧ ರಾಜ್ಯಸಭೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಲೋಕಸಭೆ: ಇತ್ತ ಲೋಕಸಭೆಯಲ್ಲೂ ಗದ್ದಲ-ಗಲಾಟೆಗಳಾಗಿದ್ದು, ಪ್ರತಿಪಕ್ಷಗಳು ದೈನಂದಿನ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸಿರುವುದನ್ನು ವಿರೋಧಿಸಿವೆ. ಹೀಗಾಗಿ ಬೆಳಗ್ಗೆ 12 ಗಂಟೆಗೆ ಕಲಾಪಗಳು ಮುಂದೂಡಿಕೆಯಾದವು. ಕೊನೆಗೆ ಪರಿಸ್ಥಿತಿ ತಿಳಿಗೊಳ್ಳದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆವರೆಗೂ ಅಧಿವೇಶನ ಮುಂದೂಡಿಕೆಯಾಗಿದೆ.

ಈ ನಡುವೆ ಸ್ಪೀಕರ್ ಓಂ ಬಿರ್ಲಾ ಅವರು ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆಯ ಅಂಗೀಕಾರಕ್ಕೆ ಅವಕಾಶ ಮಾಡಿಕೊಟ್ಟರು. ಪ್ರತಿಪಕ್ಷಗಳ ಸದಸ್ಯರು ಬಾವಿಗಿಳಿದು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆ ಚರ್ಚೆಗೆ ಅವಕಾಶ ನೀಡಬೇಕು ಎಂಬ ಪ್ರತಿಪಕ್ಷಗಳ ಒತ್ತಾಯಕ್ಕೆ ಮನ್ನಣೆ ಸಿಕ್ಕಿಲ್ಲ.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನಾರೋಗ್ಯದಿಂದ ಚೇತರಿಸಿಕೊಂಡು ಸಂಸತ್‍ಗೆ ಮರಳಿದ ಬಳಿಕ ಚರ್ಚೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಆದರೆ, ಈ ನಡುವೆ ನಿರುದ್ಯೋಗ ಹಾಗೂ ಇತರ ವಿಷಯಗಳ ಚರ್ಚೆಗಳು ಕಲಾಪವನ್ನು ಅಸ್ತವ್ಯವಸ್ತ ಮಾಡಿವೆ.

Articles You Might Like

Share This Article