ನವದೆಹಲಿ, ಜು.28- ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸುತ್ತಿರುವುದು ಸೇರಿದಂತೆ ಹಲವು ಗಂಭೀರ ವಿಷಯಗಳು ಇಂದು ಕೂಡ ಚರ್ಚೆಯಾಗದೆ ಸಂಸತ್ ಕಲಾಪ ಪದೇ ಪದೇ ಮುಂದೂಡಿಕೆಯಾಗಿದೆ. ಜುಲೈ 18ರಿಂದ ಆರಂಭವಾದ ಸಂಸತ್‍ನ ಉಭಯ ಸದನಗಳ ಕಲಾಪದಲ್ಲಿ ಈವರೆಗೂ ಸುಗಮ ಕಲಾಪ ನಡೆದೆ ಇಲ್ಲ.
ಪ್ರತಿಪಕ್ಷಗಳಾದ ಕಾಂಗ್ರೆಸ್, ಸಿಪಿಎಂ, ಟಿಎಂಸಿ, ಟಿಎಸ್‍ಆರ್, ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಸಂಸತ್‍ನಲ್ಲಿ ಹಣದುಬ್ಬರ, ಮೊಸರು ಹಾಗೂ ಇತರ ದಿನ ಬಳಕೆಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸಿರುವುದು, ಸೇನೆಗೆ ಅಗ್ನಿಪಥ್ ಮೂಲಕ ಅಲ್ಪಾವಧಿ ನೇಮಕಾತಿ, ನಿರುದ್ಯೋಗ ದಾಖಲಾರ್ಹ ಹೆಚ್ಚಳ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ವಿದೇಶಿ ವಿನಿಮಯ ಏರಿಳಿಕೆ, ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಸೇರಿದಂತೆ ಹಲವು ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ, ಗುಜರಾತ್‍ನಲ್ಲಿ ಅನುಮಾನಾಸ್ಪದ ಮದ್ಯ ಸೇವಿಸಿ 20ಕ್ಕೂ ಹೆಚ್ಚು ಜನರ ಸಾವು ಸೇರಿದಂತೆ ಹಲವು ವಿಷಯಗಳ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದವು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಅವರ ಬಂದ ಬಳಿಕ ಬೆಲೆ ಏರಿಕೆ ಕುರಿತು ಚರ್ಚೆ ಕೈಗೆತ್ತಿಕೊಳ್ಳುವುದಾಗಿ ಸರ್ಕಾರ ಹೇಳಿತ್ತು. ಆದರೆ ಉಳಿದ ಮಹತ್ವದ ವಿಷಯಗಳ ಚರ್ಚೆಗೆ ಅವಕಾಶ ಸಿಕ್ಕಿರಲಿಲ್ಲ.
ಇದನ್ನು ವಿರೋಧಿಸಿ ಕಾಲ ಕಾಲಕ್ಕೆ ಪ್ರತಿಪಕ್ಷಗಳು ಸಂಸತ್‍ನಲ್ಲಿ ಗದ್ದಲ ಮಾಡಿವೆ. ಘೋಷಣೆ ಕೂಗುವುದು, ಕಾಗದಗಳನ್ನು ಹರಿದು ತೂರುವುದು ಸೇರಿದಂತೆ ಹಲವು ಆಕ್ಷೇಪಾರ್ಹ ನಡವಳಿಕೆಗಳು ಪ್ರತಿಪಕ್ಷಗಳಿಂದ ವ್ಯಕ್ತವಾಗಿದೆ. ಆದರೆ ಇದನ್ನೇಲ್ಲಾ ಸಮರ್ಥಿಸಿಕೊಂಡಿರುವ ಪ್ರತಿಪಕ್ಷಗಳು, ಜನರ ಸಮಸ್ಯೆಗೆ ಚರ್ಚೆಗೆ ಅವಕಾಶ ಕೇಳುತ್ತಿದ್ದೇವೆ. ಸರ್ಕಾರ ಸರ್ವಾಧಿಕಾರ ಧೋರಣೆಯಿಂದ ನಿರಾಕರಣೆ ಮಾಡುತ್ತಿದೆ ಎಂದು ಆರೋಪಿಸಿವೆ. ಇದೇ ಮೊದಲ ಬಾರಿಗೆ ಸಂಸತ್‍ನಲ್ಲಿ ಪ್ರತಿಪಕ್ಷಗಳಲ್ಲಿ ಹಿಂದೆಂದು ಇಲ್ಲದಷ್ಟು ಒಗ್ಗಟ್ಟು ಮೂಡಿದೆ.
ರಾಜ್ಯಸಭೆಯಲ್ಲಿ ಸಭಾಪತಿ ವೆಂಕಯ್ಯ ನಾಯ್ಡು ಅವರು 20ಕ್ಕೂ ಹೆಚ್ಚು ಸದಸ್ಯರನ್ನು ಅಮಾನತು ಮಾಡಿದ್ದಾರೆ. ಇಂದು ಕೂಡ ಗದ್ದಲ ನಡೆದಿದ್ದರಿಂದ ಹೊಸದಾಗಿ ಮೂವರು ಸದಸ್ಯರನ್ನು ಅಮಾನತು ಮಾಡಲಾಗಿದೆ. ಅಮ್ ಆದ್ಮಿ ಪಕ್ಷದ ಸುಶೀಲ್ ಗುಪ್ತಾ, ಸಂದೀಪ್ ಪಾಟಕ್, ಪಕ್ಷೇತರ ಸದಸ್ಯ ಅಜಿತ್ ಭೂಯಾನ್ ಅವರ ವಿರುದ್ಧ ಅಮಾನತು ದಂಡನೆ ಪ್ರಯೋಗಿಸಲಾಗಿದೆ. ವಾರದ ಮಟ್ಟಿಗೆ ಈ ಸದಸ್ಯರನ್ನು ಅಮಾನತು ಮಾಡಲಾಗಿದೆ. ಅತ್ತ ಲೋಕಸಭೆಯಲ್ಲೂ ನಾಲ್ವರು ಸಂಸದರು ಅಮಾನತುಗೊಂಡಿದ್ದಾರೆ.
ಇಷ್ಟು ದಿನ ಹಣಕಾಸು ಸಚಿವರಿಲ್ಲ ಎಂದು ಚರ್ಚೆಗೆ ನಿರಾಕರಣೆ ಮಾಡಲಾಗುತ್ತಿತ್ತು. ಇಂದು ಸಚಿವೆ ನಿರ್ಮಾಲ ಸೀತಾರಾಮನ್ ಸಂಸತ್‍ಗೆ ಆಗಮಿಸಿದ್ದರು. ಆದರೆ ಇವತ್ತು ಆಡಳಿತ ಪಕ್ಷಗಳ ಸದಸ್ಯರೆ ಜೋರು ಗದ್ದಲ ಮಾಡಿ ಕಲಾಪ ಮುಂದೂಡಿಕೆ ಕಾರಣವಾದರು.
ಲೋಕಸಭೆಯ ಕಾಂಗ್ರೆಸ್ ನಾಯಕ ಅೀಧಿರ್ ರಂಜನ್ ಚೌದರಿ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ರಾಷ್ಟ್ರಪತ್ನಿ ಎಂದು ಕರೆಯುವ ಮೂಲಕ ಬುಡಕಟ್ಟು ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿ ಉಭಯ ಸದನಗಳಲ್ಲಿ ಪ್ರತಿಭಟನೆ ವ್ಯಕ್ತ ಪಡಿಸಿದೆ. ಇದರಿಂದ ಉಂಟಾದ ಕೋಲಾಹಲದ ಕಾರಣಕ್ಕೆ ಲೋಕಸಭೆಯನ್ನು ಮಧ್ಯಾಹ್ನ 12 ಗಂಟೆಗೆ ಒಂದು ಬಾರಿ ಮುಂದೂಡಲಾಯಿತು. ಮತ್ತೆ ಸದನ ಸಮಾವೇಶಗೊಂಡಾಗಲೂ ಗದ್ದಲ ಮುಂದುವರೆದಾಗ ಸಂಜೆ ನಾಲ್ಕು ಗಂಟೆವರೆಗೂ ಕಲಾಪ ಮುಂದೂಡಿಕೆಯಾಗಿದೆ.
ಅೀಧಿರ್ ರಂಜನ್ ಚೌದರಿ ತಮ್ಮ ಹೇಳಿಕೆಗೆ ಈಗಾಗಲೇ ಕ್ಷಮೆ ಕೇಳಿದ್ದಾರೆ, ಆದರೂ ಒಪ್ಪದ ಬಿಜೆಪಿ ಸಂಸದರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದು ಗದ್ದಲ ಮಾಡಿವೆ.
ಅತ್ತ ರಾಜ್ಯಸಭೆಯಲ್ಲೂ ಗದ್ದಲ ಮುಂದುವರೆದಿದೆ. ಹೊಸದಾಗಿ ಮೂವರು ಸದಸ್ಯರನ್ನು ಅಮಾನತು ಮಾಡಿದ ಬಳಿಕವೂ ಪ್ರತಿಪಕ್ಷಗಳು ಬೆಲೆ ಏರಿಕೆ ಕುರಿತು ಚರ್ಚೆಗೆ ಪಟ್ಟು ಹಿಡಿದವು. ಈ ನಡುವೆ ಬಿಜೆಪಿ ಅೀರ್ ರಂಜನ್ ಚೌದರಿ ಹೇಳಿಕೆ ವಿರೋಧಿಸಿ ಗದ್ದಲ ನಡೆಸಿದ್ದರಿಂದ ಕಲಾಪ ಅಸ್ತವ್ಯಸ್ಥವಾಗಿತ್ತು. ಹಾಗಾಗಿ ಮಧ್ಯಾಹ್ನ 2 ಗಂಟೆಗೆ ಬೋಜನ ವಿರಾಮದವರೆಗೂ ಕಾರ್ಯಕಲಾಪಗಳನ್ನು ಮುಂದೂಡಲಾಗಿದೆ.