ಬೆಂಗಳೂರು,ಜು.27- ಸದ್ಯಕ್ಕೆ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಸಾಮಾನ್ಯವಾಗಿ ಜುಲೈ-ಆಗಸ್ಟ್‍ನಲ್ಲಿ ನಡೆಸಬೇಕಾಗಿದ್ದ ಮುಂಗಾರು ಅಧಿವೇಶನವನ್ನು ಸರ್ಕಾರ ಮುಂದೂಡಿದೆ.
ವಾಡಿಕೆಯಂತೆ ಜುಲೈನಲ್ಲಿ ನಡೆಯಬೇಕಾಗಿದ್ದ ಮುಂಗಾರು ಅಧಿವೇಶನ ನಡೆಸಬೇಕಿತ್ತು. ಬಸವರಾಜ್ ಬೊಮ್ಮಾಯಿ ಸರ್ಕಾರದ ವರ್ಷದ ಸಂಭ್ರಮ ಹಾಗೂ ಪಕ್ಷ ಸಂಘಟನೆ ಹಿನ್ನೆಲೆ ಜುಲೈ ತಿಂಗಳಲ್ಲಿ ಅಧಿವೇಶನ ನಡೆಸದಿರಲು ನಿರ್ಧರಿಸಿತ್ತು. ಇದೀಗ ಆಗಸ್ಟ್ ತಿಂಗಳಲ್ಲೂ ನಡೆಸದಿರಲು ತೀರ್ಮಾನಿಸಲಾಗಿದೆ. ಅಲ್ಲದೇ, ಸೆಪ್ಟೆಂಬರ್ನಲ್ಲಿ ನಡೆಸುವ ಆಲೋಚನೆಯಲ್ಲಿ ಸರ್ಕಾರವಿದೆ ಎಂದು ತಿಳಿದು ಬಂದಿದೆ.
ಈ ಎರಡು ತಿಂಗಳ ಕಾಲ ಆಡಳಿತಾರೂಢ ಬಿಜೆಪಿಯು ಪಕ್ಷ ಸಂಘಟನೆ, ಚುನಾವಣಾ ಪೂರ್ವ ಕಾರ್ಯಕ್ರಮ, ಸರ್ಕಾರದ ವರ್ಷಾಚರಣೆ, ಜಾತಿವಾರು ಸಭೆಗಳಲ್ಲಿ ತೊಡಗಿದೆ. ಅಲ್ಲದೇ, ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಸಮಾವೇಶಗಳ ಮೊರೆ ಹೋಗಿದೆ. ಇತ್ತ, ಆಗಸ್ಟ್ 15ರಿಂದ ಸ್ಪೀಕರ್ ವಿಶ್ವೇಶ್ವರ ಕಾಗೇರಿ 15 ದಿನಗಳ ವಿದೇಶ ಪ್ರಯಾಣ ನಡೆಸಲಿದ್ದಾರೆ. ಹೀಗಾಗಿಯೇ ಅಧಿವೇಶನವು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ವಿಷಯವನ್ನು ಖುದ್ದು ಸ್ಪೀಕರ್ ಕಾಗೇರಿ ಮಾಹಿತಿ ನೀಡಿದ್ಧಾರೆ.
ಬೆಳಗಾವಿಯಲ್ಲೇ ಅಧಿವೇಶನ?: ನವೆಂಬರ್ – ಡಿಸೆಂಬರ್‍ನಲ್ಲಿ ನಡೆಯುವ ಚಳಿಗಾಲದ ಬೆಳಗಾವಿಯಲ್ಲಿ ಅಧಿವೇಶನವು ನಡೆಸಲಾಗುತ್ತದೆ. ಮುಂಗಾರು ಅಧಿವೇಶನವು ಸೆಪ್ಟೆಂಬರ್ ನಡೆಯಲಿರುವ ಹಿನ್ನೆಲೆಯಲ್ಲಿ ಇದನ್ನು ಬೆಂಗಳೂರು ಬದಲು ಬೆಳಗಾವಿಯಲ್ಲೇ ನಡೆಸುವ ಯೋಚನೆ ಸರ್ಕಾರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ಅಧಿವೇಶನ ನಡೆಸದೇ ಇದ್ದರೆ ಉತ್ತರ ಕರ್ನಾಟಕದ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್‍ನಲ್ಲಿ ಬೆಂಗಳೂರಲ್ಲಿ ಹಾಗೂ ನವೆಂಬರ್‍ನಲ್ಲಿ ಮತ್ತೊಮ್ಮೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಚುನಾವಣಾ ವರ್ಷದಲ್ಲಿ ಪಕ್ಷ ಸಂಘಟನೆಗೆ ತೊಡಕಾಗಲಿದೆ ಎಂಬ ಆಲೋಚನೆಯೂ ಸರ್ಕಾರದ್ದಾಗಿದೆ ಎಂದು ಹೇಳಲಾಗಿದೆ.