ನವದೆಹಲಿ,ಜು.22-ದೈನಂದಿನ ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಸಂಸತ್‍ನಲ್ಲಿ ಗದ್ದಲ ಎಬ್ಬಿಸಿದ್ದರಿಂದ ಪದೇ ಪದೆ ಕಲಾಪ ಮುಂದೂಡಿಕೆಯಾಯಿತು. ಲೋಕಸಭೆಯಲ್ಲಿ ಪ್ರತಿಪಕ್ಷಗಳು ತೆರಿಗೆ ಏರಿಕೆ ಮತ್ತು ಹಣದುಬ್ಬರ ಹೆಚ್ಚಳ ವಿರೋಧಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದರಿಂದಾಗಿ ಮಧ್ಯಾಹ್ನ 12 ಗಂಟೆಗೆ ಒಮ್ಮೆ ಕಲಾಪವನ್ನು ಮುಂದೂಡಲಾಯಿತು.
ಮತ್ತೆ ಸದನ ಸಮಾವೇಶಗೊಂಡಾಗಲೂ ಗದ್ದಲ ಮುಂದುವರೆದಿದ್ದರಿಂದ ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಲಾಗಿದೆ. ಇತ್ತ ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳ ಪ್ರತಿರೋಧ ತೀವ್ರವಾಗಿದ್ದು, ಬೆಲೆ ಏರಿಕೆ ಮತ್ತು ಜಿಎಸ್‍ಟಿ ವಿಧಿಸಿರುವುದರ ವಿರುದ್ಧ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿವೆ.
ಸಭಾಪತಿ ಎಂ.ವೆಂಕಯ್ಯನಾಯ್ಡು ಸೂಚನೆ ಮೇರೆಗೆ ಹಲವು ಸದಸ್ಯರು ಕಾಗದ ಪತ್ರಗಳನ್ನು ಮಂಡಿಸಿದರು. ಉತ್ತರ ಪ್ರದೇಶದಿಂದ ಪಕ್ಷೇತರರಾಗಿ ಆಯ್ಕೆಯಾಗಿರುವ ಕಪಿಲ್‍ಸಿಬಾಲ್ ಪ್ರಮಾಣವಚನ ಸ್ವೀಕರಿಸಿದರು.
ಪ್ರತಿಪಕ್ಷಗಳ ಶಾಸಕರು ಪ್ಲೇ ಕಾರ್ಡ್‍ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರಿಂದಾಗಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಭಾಪತಿಯವರು ಪರಿಸ್ಥಿತಿ ತಿಳಿಗೊಳಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಪ್ರಯೋಜನವಾಗಿರಲಿಲ್ಲ. ಹೀಗಾಗಿ ಕಲಾಪವನ್ನು ಕೆಲ ಕಾಲ ಮಧ್ಯಾಹ್ನದವರೆಗೂ ಮುಂದೂಡಲಾಯಿತು.
ಜುಲೈ 18ರಿಂದ ಆರಂಭವಾಗಿರುವ ಸಂಸತ್ ಅಧಿವೇಶನದಲ್ಲಿ ಸಣ್ಣಪುಟ್ಟ ಪ್ರಶ್ನೋತ್ತರಗಳನ್ನು ಹೊರತುಪಡಿಸಿ ಪ್ರಮುಖ ಕಲಾಪಗಳು ನಡೆಯುತ್ತಿಲ್ಲ. ಕೇಂದ್ರ ಸಚಿವರು ಗದ್ದಲದ ನಡುವೆಯೇ ಹಲವು ಮಸೂದೆಗಳನ್ನು ಮಂಡಿಸಿದ್ದಾರೆ.