ಬ್ರೆಜಿಲ್ : ಭಾರಿ ಮಳೆ, ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 117ಕ್ಕೆ ಏರಿಕೆ

Social Share

ಪೆಟ್ರೊಪೊಲಿಸ್(ಬ್ರೆಜಿಲ್),ಫೆ.18- ಬ್ರೆಜಿಲ್‍ನ ಗುಡ್ಡಗಾಡು ನಗರ ಪೆಟ್ರೊಪೊಲಿಸ್‍ನಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಿಂದ ಸಾವಿಗೀಡಾದವರ ಸಂಖ್ಯೆ 117ಕ್ಕೇರಿದೆ. ಇನ್ನೂ 116 ಜನರು ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಕ್ಷಿಪ್ರವಾಗಿ ಏರಿಕೆಯಾಗುವ ಸಂಭವ ಇದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ರಿಯೋ ಡಿ ಜನೈರೋ ನಗರದ ಮೇಲೆ ಬೆಟ್ಟದಲ್ಲಿ ನೆಲೆಗೊಂಡಿರುವ ಜರ್ಮನ್ ಪ್ರಭಾವಿತ ನಗರದಲ್ಲುಂಟಾದ ಭೂಕುಸಿತದಿಂದಾಗಿ ಮಣ್ಣಿನ ಕೆಳಗೆ ಇನ್ನಷ್ಟು ಮಂದಿ ಸಜೀವ ಸಮಾಧಿಯಾಗಿರುವ ಭೀತಿ ವ್ಯಕ್ತವಾಗಿದೆ. ರಿಯೋ ಡಿ ಜನೈರೋ ರಾಜ್ಯ ಸರ್ಕಾರವು ಏರುಗತಿಯಲ್ಲಿರುವ ಸಾವಿನ ಪ್ರಮಾಣವನ್ನು ಖಚಿತಪಡಿಸಿದೆ.
ದಶಕಗಳಲ್ಲೇ ಕಂಡರಿಯದ ಭಾರಿ ಮಳೆಯ ಕಾರಣ ಉಂಟಾದ ಪ್ರವಾಹ ಮತ್ತು ಮಣ್ಣಿನ ಕುಸಿತಗಳು ನಗರದ ರಸ್ತೆಗಳಿಂದ ಕಾರ್‍ಗಳನ್ನು ಹಾಗೂ ಮನೆಗಳನ್ನು ಕೊಚ್ಚಿಕೊಂಡು ಹೋಗಿವೆ. ಉಕ್ಕೇರಿದ ನದಿಯಲ್ಲಿ ಮುಳುಗುತ್ತಿರುವ ಬಸ್‍ಗಳ ಕಿಟಕಿಯಿಂದ ಹೊರಬಂದು ಜೀವವುಳಿಸಿಕೊಳ್ಳಲು ಹರಸಾಹಸಪಡುತ್ತಿರುವ ಜನರ ಚಿತ್ರವನ್ನು ವಿಡಿಯೋ ತುಣುಕು ತೋರಿಸುತ್ತಿದೆ. ಕೆಲವರು ನದಿಯ ದಡ ಸೇರಲು ಸಾಧ್ಯವಾಗದೆ ಕೊಚ್ಚಿಹೋಗಿ ಕಣ್ಮರೆಯಾಗಿದ್ದಾರೆ.
ಕುಸಿದ ಮಣ್ಣಿನ ಅವಶೇಷಗಳಡಿ ಜನರು ತಮ್ಮ ಪ್ರೀತಿ ಪಾತ್ರರನ್ನು ಹುಡುಕುತ್ತಿರುವ ದೃಶ್ಯ ಮನಕಲಕುವಂತಿದೆ. ಇಳಿಜಾರು ಪ್ರದೇಶವಾಗಿರುವ ಕಾರಣ ಇನ್ನಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಇಂದು ಕೂಡ ಒಮ್ಮೆ ಚಿಕ್ಕ ಪ್ರಮಾಣದ ಭೂಕುಸಿತ ಉಂಟಾಗಿದೆ. ಆದರೆ, ಯಾರಿಗೂ ಗಾಯಗಳಾಗಿಲ್ಲ. ಇಲ್ಲಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಸಂಜೆ ವೇಳೆ ಮತ್ತೆ ಭಾರಿ ಮಳೆಯಾಗುತ್ತಿರುವುದರಿಂದ ಪರಿಹಾರ ಕಾರ್ಯಕ್ಕೆ ಅಡಚಣೆಯಾಗಿದೆ. ಅಪಾಯಕಾರಿ ಪ್ರದೇಶಗಳ ನಿವಾಸಿಗಳು ಬೇರೆಡೆಗೆ ತೆರಳಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

Articles You Might Like

Share This Article