ಬೆಂಗಳೂರು,ಜು.18- ಭೂ ವ್ಯಾಜ್ಯ ಹಾಗೂ ಮಸೀದಿ ಅಧ್ಯಕ್ಷ ಸ್ಥಾನಕ್ಕಾಗಿ ಬಿಬಿಎಂಪಿ ಮಾಜಿ ಕಾಪೆರ್ರೇಟರ್ ಪತಿ ಅಯ್ಯೂಬ್ ಖಾನ್ ಅವರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಸಂಬಂಧಿಕ ಮತೀನ್ ಖಾನ್‍ನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಲವು ದಿನಗಳಿಂದ ಭೂ ವ್ಯಾಜ್ಯ ಹಾಗೂ ಮಸೀದಿ ಅಧ್ಯಕ್ಷ ಸ್ಥಾನಕ್ಕಾಗಿ ಅಯ್ಯೂಬ್ ಖಾನ್ ಹಾಗೂ ಅವರ ಅಣ್ಣನ ಮಗ ಮತೀನ್ ಖಾನ್ ನಡುವೆ ಮನಸ್ತಾಪವಿತ್ತು. ಕಳೆದ 13ರಂದು ರಾತ್ರಿ ಅಯ್ಯೂಬ್ ಖಾನ್ ಅವರ ಮನೆಗೆ ಮತೀನ್ ಹೋಗಿದ್ದನು. ಆ ಸಂದರ್ಭದಲ್ಲಿ ಮತ್ತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಆ ಸಂದರ್ಭದಲ್ಲಿ ಅಯ್ಯೂಬ್ ಖಾನ್ ಅವರ ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಮತೀನ್ ಪರಾರಿಯಾಗಿದ್ದನು. ಗಂಭೀರ ಗಾಯಗೊಂಡಿದ್ದ ಅಯ್ಯೂಬ್ ಖಾನ್ ಅವರು ಚಿಕಿತ್ಸೆ ಫಲಿಸದೆ 14 ರಂದು ಬೆಳಗಿನ ಜಾವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಕೊಲೆ ಪ್ರಕರಣ ದಾಖಲಿಸಿ ಕೊಂಡು ಚಾಮರಾಜ ಪೇಟೆ ಠಾಣೆ ಪೊಲೀಸರು ಆರೋಪಿ ಮತೀನ್ ಪತ್ತೆಗಾಗಿ ತನಿಖೆ ಕೈಗೊಂಡಿದ್ದರು.
ಅಯ್ಯೂಬ್ ಖಾನ್ ವಿನಾಕಾರಣ ನನ್ನ ಜೊತೆ ಜಗಳವಾಡುತ್ತಿದ್ದನು ಎಂದು ಮತೀನ್ ಗೌಪ್ಯ ಸ್ಥಳದಿಂದ ವಿಡಿಯೋ ಸಂದೇಶ ಮಾಡಿ ಕಳುಹಿಸಿದ್ದನು. ಆರೋಪಿ ಮತೀನ್ ಪತ್ತೆಗಾಗಿ ವಿಶೇಷ ಪೊಲೀಸರು ತಂಡವನ್ನು ರಚಿಸಲಾಗಿತ್ತು. ಈ ತಂಡ ಹಲವು ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಆರೋಪಿ ಮತೀನ್‍ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.