ಮಧುರೈ, ಜ. 10- ಕೊರೊನಾ ಸೋಂಕು ತಗುಲಿದೆ ಎಂಬ ಭೀತಿಯಲ್ಲಿ ವಿಷ ಸೇವಿಸಿದ ಪರಿಣಾಮ ತಾಯಿ ಹಾಗೂ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ಸಂಭವಿಸಿದೆ. ಮೃತಪಟ್ಟ ಮಹಿಳೆಯನ್ನು ಜ್ಯೋತಿಕಾ (29) ಎಂದು ಗುರುತಿಸಲಾಗಿದ್ದು, ವಿಷ ಸೇವಿಸಿದ ಅಸ್ವಸ್ಥರಾಗಿರುವ ಕುಟುಂಬದ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.
ಜ್ಯೋತಿಕಾಳ ತಾಯಿ ಲಕ್ಷ್ಮಿಯ ಪತಿ ನಾಗರಾಜ್ ಎಂಬುವವರು ಇತ್ತೀಚೆಗೆ ಸಹಜ ಕಾಯಿಲೆಯಿಂದಾಗಿ ಕಳೆದ ಡಿಸೆಂಬರ್‍ನಲ್ಲಿ ಮೃತಪಟ್ಟಿದ್ದರು, ಆಗಿನಿಂದಲೂ ಕುಟುಂಬದ ನಿರ್ವಹಣೆ ತುಂಬಾ ಕಷ್ಟವಾಗಿತ್ತು, ಈ ನಡುವೆ ಮಗಳು ಜ್ಯೋತಿಕಾಳ ತನ್ನ ಗಂಡನನ್ನು ಬಿಟ್ಟು ತಾಯಿಯ ಮನೆಯಲ್ಲೇ ವಾಸಿಸುತ್ತಿದ್ದರು.
ಜನವರಿ 8 ರಂದು ಜ್ಯೋತಿಕಾಗೆ ಕೊರೊನಾ ಸೋಂಕು ತಗುಲಿದ್ದು ಕೊರೊನಾ ಇಡೀ ಕುಟುಂಬಕ್ಕೆ ಅಂಟಿದೆ ಎಂಬ ಭೀತಿಯಲ್ಲಿ ಇಡೀ ಕುಟುಂಬವೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸುದ್ದಿ ತಿಳಿದ ನೆರೆಹೊರೆಯವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜ್ಯೋತಿಕಾ, ಲಕ್ಷ್ಮೀ, ಆಕೆಯ ಇಬ್ಬರು ಗಂಡು ಮಕ್ಕಳು, ಜ್ಯೋತಿಕಾಳ ಮೂರು ವರ್ಷದ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಚಿಕಿತ್ಸೆ ಫಲಿಸದೆ ಜ್ಯೋತಿಕಾ ಹಾಗೂ ಮಗು ಸಾವನ್ನಪ್ಪಿದ್ದು, ಲಕ್ಷ್ಮೀ ಹಾಗೂ ಅವರ ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
