ಮಾಗಡಿ,ಸೆ.4- ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹೊಸಪಾಳ್ಯದಲ್ಲಿ ನಡೆದಿದೆ.ಮಾಗಡಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಅವರ ಪತ್ನಿ ರೂಪ(38) ಇವರ ಮಕ್ಕಳಾದ ಹರ್ಷಿತ (6) ಹಾಗೂ ಸ್ಪೂರ್ತಿ (4) ಮೃತ ದುರ್ದೈವಿಗಳಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ಇಡೀ ಕುಟುಂಬ ತಿರುಪತಿಗೆ ತೆರಳಿ ವಾಪಸ್ ಆಗಿದ್ದರು. ಇಂದು ಮುಂಜಾನೆ ಮಕ್ಕಳನ್ನೊ ಕರೆದುಕೊಂಡು ರೂಪ ಜಮೀನಿಗೆ ಹೋಗಿದ್ದರು.ಎಷ್ಟೊ ಹೊತ್ತಾದರೂ ಬಾರದ ಕಾರಣ ಆತಂಕಗೊಂಡ ಮನೆಯವರು ಹುಡುಕಾಟ ನಡೆಸಿ ತಮ್ಮ ಜಮೀನಿನ ಬಳಿ ಹೋದಾಗ ಅವರ ಶವ ಪತ್ತೆಯಾಗಿದೆ.
ಮೊದಲು ಮಕ್ಕಳಿಗೆ ವಿಷ ಕುಡಿಸಿ ನಂತರ ರೂಪ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆಗೆ ಕಾರಣ ಏನೆಂದು ನಿಖರವಾಗಿ ತಿಳಿದು ಬಂದಿಲ್ಲವಾದರೂ ಬೆಳ್ಳಂಬೆಳಗ್ಗೆ ಈ ದುರಂತ ನಡೆದಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.
ಲೋಕೇಶ್ ಕೆಲಸ ನಿಮಿತ್ತ ಹೊರಗೆ ಹೋಗಿದ್ದು, ನಿನ್ನೆ ಮನೆಗೆ ಬಂದಿಲ್ಲ ಎಂದು ತಿಳಿದು ಬಂದಿದೆ. ಲೋಕೇಶ್ ತಂದೆ ಮುನಿಸ್ವಾಮಯ್ಯ ಅನಾರೋಗ್ಯ ಪೀಡಿತರಾಗಿದ್ದು, ಪತ್ನಿ ಹಾಗೂ ಮಕ್ಕಳು ಮಾತ್ರ ಮನೆಯಲ್ಲಿ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ದಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಇದು ಕೌಟುಂಬಿಕ ಕಲಹದಿಂದ ಈ ದುರಂತ ನಡೆದಿರಬಹುದೆಂದು ಶಂಕಿಸಲಾಗಿದೆ.ದುಡಿಕಿನ ನಿರ್ಧಾರದಿಂದ ಘಟನೆ ನಡೆದಿರುವುದಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಮಾಗಡಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.