ಬೆಂಗಳೂರಲ್ಲಿ ತಾಯಿ-ಮಗಳನ್ನು ಕೊಂದಿದ್ದ ಆರೋಪಿ ಅಂದರ್..!

ಬೆಂಗಳೂರು, ಅ.11- ಬೇಗೂರಿನ ಚೌಡೇಶ್ವರಿ ಲೇಔಟ್‍ನ ಮನೆಯೊಂದರಲ್ಲಿ ಹಾಡಹಗಲೇ ತಾಯಿ-ಮಗಳನ್ನು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆಗ್ನೇಯ ವಿಭಾಗದ ಪೊಲೀಸರು ಆರೋಪಿಯನ್ನು ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಚೌಡೇಶ್ವರಿ ಲೇಔಟ್‍ನಲ್ಲಿ ಚನ್ನವೀರಸ್ವಾಮಿ, ಪತ್ನಿ ಯಮುನಾ ಅಲಿಯಾಸ್ ಚಂದ್ರಕಲಾ ಹಾಗೂ ಮೂರು ವರ್ಷದ ರಾತನ್ಯ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ 6ರಂದು ಚನ್ನವೀರಸ್ವಾಮಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದಾಗ ಆರೋಪಿ ಇವರ ಮನೆಗೆ ಬಂದು ಚಂದ್ರಕಲಾ ಜತೆ ಜಗಳವಾಡಿ ಆಕೆಯ ಮಗಳನ್ನು ಕತ್ತುಕೊಯ್ದು ಕೊಲೆ ಮಾಡಿ ನಂತರ ಚಂದ್ರಕಲಾ ಅವರ ತಲೆಗೆ ಯಾವುದೋ ಆಯುಧದಿಂದ ಹೊಡೆದು ಚಾಕುವಿನಿಂದ ಮನಬಂದಂತೆ ದೇಹದ 20ಕ್ಕೂ ಹೆಚ್ಚು ಕಡೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.

ಈ ಜೋಡಿ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಗ್ನೇಯ ವಿಭಾಗದ ಪೊಲೀಸರು ಚಂದ್ರಕಲಾ ಅವರ ಮೊಬೈಲ್ ಪರಿಶೀಲಿಸಿ ಅದರ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಫೇಸ್‍ಬುಕ್‍ನಲ್ಲಿ ಚಂದ್ರಕಲಾ ಅವರಿಗೆ ಪರಿಚಯವಾಗಿದ್ದು, ಸ್ನೇಹ ಮುಂದುವರೆಸಿದ್ದರು.

ತಾಯಿ-ಮಗಳ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹಣಕ್ಕಾಗಿ ಪೀಡಿಸುತ್ತಿದ್ದುದೇ ಕೊಲೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.