ಕರುಳ ಕುಡಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ

Social Share

ಬೆಂಗಳೂರು, ಆ.8- ತನ್ನ ಹತ್ತು ವರ್ಷದ ಕರುಳ ಕುಡಿಯನ್ನು ಸಾಯಿಸಿ ನಂತರ ದಂತ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಂತ ವೈದ್ಯೆ ಶೈಮಾ (36) ತನ್ನ ಹತ್ತು ವರ್ಷದ ಮಗಳು ಆರಾಧನಾಳನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿರುವ ತಾಯಿ.

ಜನಶಂಕರಿ 2ನೆ ಹಂತ, ಸೇವಾಶ್ರಮ ಆಸ್ಪತ್ರೆ ಸಮೀಪ ಶೈಮಾ ಅವರ ಮನೆಯಿದೆ. ಇವರ ಪತಿ ನಾರಾಯಣ ಸಹ ದಂತ ವೈದ್ಯರಾಗಿದ್ದು , ಕ್ಲಿನಿಕ್ ಇಟ್ಟುಕೊಂಡಿದ್ದಾರೆ. ಮಗಳು ಆರಾಧನಾ 4ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಈ ಕುಟುಂಬ ಅನ್ಯೋನ್ಯವಾಗಿಯೇ ಇತ್ತು ಎನ್ನಲಾಗಿದೆ. ಆದರೆ ಎರಡು ದಿನಗಳ ಹಿಂದೆ ಶೈಮಾ ತನ್ನ ಮಗಳನ್ನು ಫ್ಯಾನಿಗೆ ನೇಣು ಬಿಗಿದು ಕೊಲೆ ಮಾಡಿ ನಂತರ ಅದೇ ಫ್ಯಾನ್‍ಗೆ ಆಕೆಯೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಂದು ನಾರಾಯಣ ಅವರು ಕ್ಲಿನಿಕ್‍ನಿಂದ ಮನೆಗೆ ಫೋನ್ ಮಾಡಿದ್ದಾರೆ. ಆದರೆ ಪತ್ನಿ ಕರೆ ಸ್ವೀಕರಿಸಿರಲಿಲ್ಲ. ತಕ್ಷಣ ಆತಂಕಗೊಂಡು ಅವರು ಮನೆಗೆ ಬಂದು ನೋಡಿದಾಗಲೇ ಪತ್ನಿ-ಮಗಳು ಸಾವನ್ನಪ್ಪಿರುವುದು ಗೊತ್ತಾಗಿದೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ತಾಯಿ-ಮಗಳ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.
ಶೈಮಾ ಅವರ ಸಹೋದರ ಆಸ್ಟ್ರೇಲಿಯಾದಿಂದ ಇದೀಗ ಬಂದಿದ್ದು, ಅವರು ನೀಡಿದ ದೂರಿನನ್ವಯ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪತಿ-ಪತ್ನಿ ನಡುವೆ ಮನಸ್ತಾಪವಾಗಿ ಪತ್ನಿ ತನ್ನ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸಂಪಂಗಿರಾಮನಗರದಲ್ಲಿ ಇತ್ತೀಚೆಗೆ ದಂತ ವೈದ್ಯ ತನ್ನ ಬುದ್ಧಿ ಮಾಂದ್ಯ ಮಗಳನ್ನು ಮಹಡಿಯಿಂದ ಎಸೆದು ಸಾಯಿಸಿರುವ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದೆ.

Articles You Might Like

Share This Article