ಗೋವಾ, ಜ. 27- ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ನಟಿ ಮೌನಿರಾಯ್ ಅವರು ಇಂದು ತಮ್ಮ ದೀರ್ಘ ಕಾಲದ ಗೆಳೆಯ ಸೂರಜ್ ನಂಬಿಯಾರ್‍ರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಮೌನಿರಾಯ್ ಹಾಗೂ ಸೂರಜ್ ವಿವಾಹದಲ್ಲಿ 2 ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಆಪ್ತೇಷ್ಟರು ಮಾತ್ರ ಪಾಲ್ಗೊಂಡಿದ್ದರು.
ಮಲಯಾಳಂ ಸಂಪ್ರದಾಯ ದಂತೆ ಇವರ ವಿವಾಹ ಮಹೋತ್ಸವವು ನೆರವೇರಿದ್ದು ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಿರುತೆರೆಯಿಂದ ಬೆಳಕಿಗೆ ಬಂದ ಮೌನಿರಾಯ್ ಅವರಿಗೆ ನಾಗಿಣಿ ಧಾರಾವಾಹಿಯಲ್ಲಿ ಅವರು ಮಾಡಿದ್ದ ಪಾತ್ರ ಸಾಕಷ್ಟು ಗಮನ ಸೆಳೆಯಿತು.
ನಂತರ 2004ರಲ್ಲಿ ಸಂಜಯ್‍ದತ್ ಹಾಗೂ ರಂಗೀಲಾ ಬೆಡಗಿ ಊರ್ಮಿಳಾ ಮಾಂತ್ಕೋರ್ಡರ್ ಅವರು ನಟಿಸಿದ್ದ ರನ್ ಚಿತ್ರದ ವಿಶೇಷ ಹಾಡಿಗೆ ಸ್ಟೆಪ್ಸ್ ಹಾಕುವ ಮೂಲಕ ಸಿನಿಮಂದಿಯ ಗಮನ ಸೆಳೆದರು.
2018 ರಲ್ಲಿ ಬಾಲಿವುಡ್ ನಟಿಯಾಗಿ ಬಡ್ತಿ ಪಡೆದ ಮೌನಿರಾಯ್ ನಟನೆಯ ಗೋಲ್ಡ್ ಚಿತ್ರವು ಸಾಕಷ್ಟು ಹೆಸರು ತಂದುಕೊಟ್ಟಿತು. ಅದೇ ವರ್ಷ ಹಿಂದಿ ಆವತರಣಿಕೆ ಕಂಡ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಗಲಿ ಗಲಿ ಹಾಡಿನಲ್ಲಿ ಮೌನಿ ಕುಣಿದ ಭಂಗಿಗೆ ಪಡ್ಡೆ ಹೈಕಳು ಫಿದಾ ಆಗಿದ್ದರು.
ಮೌನಿ ರಾಯ್ ಮದುವೆ ಆಗಿರುವ ಹುಡುಗ ದುಬೈನಲ್ಲಿ ತನ್ನದೇ ಆದ ಸ್ವಂತ ಉದ್ಯಮ ಹೊಂದಿದ್ದು ಈ ಜೋಡಿಗೆ ಹಲವು ಮಂದಿ ಶುಭಾಶಯ ಕೋರಿದ್ದಾರೆ.
