ಪ್ರತಾಪ್‍ ಚಂದ್ರ ಶೆಟ್ಟಿ ಕೂಡಲೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ರೇಣುಕಾಚಾರ್ಯ

Spread the love

ಬೆಂಗಳೂರು,ಡಿ.16-ವಿಧಾನಪರಿಷತ್‍ನಲ್ಲಿ ಸಂಖ್ಯಾಬಲ ಕಳೆದುಕೊಂಡಿರುವ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸದನದ ಗೌರವವನ್ನು ಎತ್ತಿ ಹಿಡಿಯಬೇಕೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿಯವರಿಗೆ ಮೇಲ್ನೋಟಕ್ಕೆ ಸಂಖ್ಯಾ ಬಲ ಕಳೆದುಕೊಂಡಿರುವುದು ದೃಢಪಟ್ಟಿದೆ. ಸದನದ ಸಂಪ್ರದಾಯವನ್ನು ಉಳಿಸಬೇಕಾದ ಕಾರಣ ರಾಜೀನಾಮೆ ನೀಡುವುದು ಸರಿಯಾದ ಮಾರ್ಗ ಎಂದು ಹೇಳೀದರು.

ಸಭಾಪತಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರೂ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಿತೂರಿಯಿಂದ ಪ್ರತಾಪ್ ಚಂದ್ರಶೆಟ್ಟಿ ಅವರನ್ನು ರಾಜೀನಾಮೆ ಕೊಡದಂತೆ ಒತ್ತಡ ಹಾಕಿದ್ದಾರೆ. ಮಂಗಳವಾರ ನಡೆದ ಘಟನೆಗೆ ಕಾಂಗ್ರೆಸ್ ನೇರ ಕಾರಣ ಎಂದು ಹರಿಹಾಯ್ದರು.

ಕರ್ನಾಟಕದ ವಿಧಾನಪರಿಷತ್‍ಗೆ ದೇಶದಲ್ಲೇ ತನ್ನದೇ ಆದ ಇತಿಹಾಸ ಮತ್ತು ಘನತೆ ಗೌರವವಿತ್ತು. ಮಂಗಳವಾರ ನಡೆದ ಘಟನೆಯಿಂದಾಗಿ ರಾಜ್ಯದ ಮರ್ಯಾದೆ ಬೀದಿಪಾಲಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದವರೇ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಈ ಹಿಂದೆ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರ ಮೇಲೆ ಅಂದಿನ ಕಾಂಗ್ರೆಸ್‍ನವರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ಅಂದು ಅವರು ಸಭಾಪತಿಗಳು ಪೀಠದಲ್ಲಿ ಕೂರದೆ ಸದನ ನಡೆಸಲು ಉಪಸಭಾಪತಿಗೆ ಅನುವು ಮಾಡಿಕೊಟ್ಟಿದ್ದರು. ಇದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ನ ಕುತಂತ್ರ ರಾಜಕಾರಣಕ್ಕೆ ಪ್ರತಾಪ್‍ಚಂದ್ರ ಶೆಟ್ಟಿ ಅವರು ಬಲಿಯಾಗಿದ್ದಾರೆ. ಅವರು ರಾಜೀನಾಮೆ ಕೊಡಲು ಮುಂದಾಗಿದ್ದರೂ ಪಕ್ಷದವರೇ ತಡೆಯೊಡ್ಡಿದ್ದಾರೆ. ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೆರಿದಂತೆ ಅನೇಕ ಕಡೆ ಇಂಥ ಗುಂಡಾವರ್ತನೆ ಮಾಡಿಯೇ ಇಂದು ಆ ಪಕ್ಷ ದುಸ್ಥಿತಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ದೇಶದ ಎಲ್ಲ ಕಡೆ ಇಂದು ಕಾಂಗ್ರೆಸ್ ಅವಸಾನದಂಚಿಗೆ ಬಂದಿದೆ. ಪೀಠದಲ್ಲಿ ಕುಳಿತಿದ್ದ ಉಪಸಭಾಪತಿಯನ್ನು ಗೂಂಡಾಗಳಂತೆ ವರ್ತಿಸಿ ಎಳೆದು ಹಾಕಿದ್ದು ಆ ಪಕ್ಷದ ಸಂಸ್ಕøತಿಯನ್ನು ತೋರಿಸುತ್ತದೆ. ರಾಜ್ಯದ ಜನತೆ ಕಾಂಗ್ರೆಸ್‍ಗೆ ಛೀಮಾರಿ ಹಾಕಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಸಭಾಪತಿ ಬರುವುದಿಲ್ಲ ಎಂದು ಉಪಸಭಾಪತಿ ಪೀಠ ಅಲಂಕರಿಸಿದ್ದರು. ಆದರೆ ಕಾಂಗ್ರೆಸ್ ಗೂಂಡಾಗಳು ಅವರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಅನಿವಾರ್ಯವಾಗಿ ಬಿಜೆಪಿ ಸದಸ್ಯರು ರಕ್ಷಣೆಗೆ ಹೋದರು. ಇಲ್ಲದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂದರು.

ಮಂಗಳವಾರ ನಡೆದ ಗಲಾಟೆಗೆ ನೇರವಾಗಿ ಕಾಂಗ್ರೆಸ್ ನಾಯಕರೇ ಕಾರಣ. ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. ಸಂಖ್ಯಾಬಲ ಇಲ್ಲದ ಮೇಲೆ ಅವರು ಆ ಸ್ಥಾನದಲ್ಲಿ ಮುಂದುವರೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಇನ್ನು ರೈ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಅವನೊಬ್ಬ ಬ್ಲಾಕ್‍ಮೇಲರ್ ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ನನ್ನ ವೈಯಕ್ತಿಕ ವಿಚಾರ ಮಾತನಾಡಲು ಅವನ್ಯಾರು? ಬಿಟ್ಟಿ ಹೋರಾಟ, ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಾರೆ. ಕೋಡಿಹಳ್ಳಿ ಬಿಟ್ಟು ಬಂದು ಎಷ್ಟು ಅಕ್ರಮ ಆಸ್ತಿ ಮಾಡಿದ್ದೀಯಾ ? ಅವರ ಮನೆಯ ಫೋಟೋ ಕೂಡ ಇದೆ. ಐಷಾರಾಮಿ ಬಂಗಲೆ, ಐಷಾರಾಮಿ ಕಾರಿನಲ್ಲಿ ಓಡಾಡುತ್ತಾರೆ, ಹಸಿರು ಶಾಲು ಹಾಕಿ ರೈತ ಮುಖಂಡ ಅಂತಾರೆ ಅವರು ಉಳುಮೆ ಮಾಡಿ ಎಷ್ಟು ವರ್ಷ ಆಯ್ತು? ಎಂದು ಪ್ರಶ್ನಿಸಿದರು.

ಬಿಜೆಪಿಗೆ ಯಾರೂ ಅನಿವಾರ್ಯ ಅಲ್ಲ , ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಇದೆ. ಆದರೆ ಜೆಡಿಎಸ್ ಗೆ ಯಾರು ಅನಿವಾರ್ಯ ಎಂಬುದು ನನಗೆ ಗೊತ್ತಿಲ್ಲ . ಮೈತ್ರಿ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ. ರಾಜಕೀಯದಲ್ಲಿ ನಾನಿನ್ನೂ ಅಂಬೆಗಾಲಿಡುತ್ತಾ ಇದ್ದೇನೆ ಎಂದು ಹೇಳಿದರು.  ಸಭಾಪತಿ ಮೇಲೆ ಅವಿಶ್ವಾಸಕ್ಕೆ ನಾವು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಅವರು ಬಹಿರಂಗವಾಗಿಯೇ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

Facebook Comments