ಸ್ವಪಕ್ಷೀಯರ ಮೇಲೆ ಮತ್ತೆ ರೇಣುಕಾಚಾರ್ಯ ಟೀಕೆ

Social Share

ಬೆಂಗಳೂರು,ಜ.30- ಶಾಸಕರ ಮನವಿಗೆ ಸ್ಪಂದಿಸದ ಹಾಗೂ ಕ್ಷೇತ್ರದ ಕೆಲಸ ಮಾಡಿಕೊಡದ ಕೆಲವ ದುರಹಂಕಾರಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತೆ ಸಿಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಚಿವರು ತಮ್ಮಿಂದಲೇ ಸರ್ಕಾರ ಬಂದಿದೆ. ತಮ್ಮಿಂದಲೇ ಎಲ್ಲವೂ ನಡೆಯುತ್ತದೆ ಎಂಬ ಅಹಂನಲ್ಲಿದ್ದಾರೆ. ಇಂತಹ ದುರಾಹಂಕಾರಿ ಸಚಿವರನ್ನು ತತ್‍ಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕೆಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಿದರು.
ನಾನು ಎಲ್ಲ ಸಚಿವರ ಬಗ್ಗೆ ಟೀಕೆ ಮಾಡುವುದಿಲ್ಲ. ಕೆಲವು ಸಚಿವರು ನಮ್ಮ ಮನವಿಗೆ ಸ್ಪಂದಿಸಿ ನಮ್ಮನ್ನು ಗೌರವದಿಂದ ಕಾಣುತ್ತಾರೆ. ಕ್ಷೇತ್ರದ ಕೆಲಸಗಳನ್ನು ಮಾಡಿಕೊಡುತ್ತಾರೆ. ಅಂಥವರ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲವರು ನಮ್ಮಿಂದಲೇ ಸರ್ಕಾರ, ನಾವಿಲ್ಲದಿದ್ದರೆ ಏನೂ ನಡೆಯುವುದಿಲ್ಲ ಎಂಬ ಅಹಂನಲ್ಲಿದ್ದಾರೆ. ಇಂಥವರಿಂದ ಪಕ್ಷ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು. ಕೂಡಲೇ ಇಂತಹ ಸಚಿವರನ್ನು ಸಂಪುಟದಿಂದ ವಜಾಗೊಳಿಸಿ ಪಕ್ಷ ನಿಷ್ಠರಿಗೆ ಅವಕಾಶ ಕೊಡಬೇಕೆಂದು ಕೋರಿದರು.
ನಾನು ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ, 15ಕ್ಕೂ ಹೆಚ್ಚು ಶಾಸಕರು ನಮ್ಮ ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ. ಕಡೆಪಕ್ಷ ನಮ್ಮನ್ನು ಗೌರವದಿಂದಲೂ ಕಾಣುವುದಿಲ್ಲ. ಕ್ಷೇತ್ರದ ಕೆಲಸಗಳನ್ನು ಮಾಡಿಕೊಡುತ್ತಿಲ್ಲ ಎಂಬುದನ್ನು ಗಮನಕ್ಕೆ ತಂದಿದ್ದೇನೆ. ನಾಲ್ಕು ದಿನದೊಳಗೆ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಪಡಿಸುವ ಭರವಸೆ ಇದೆ ಎಂದರು.
ನಮಗೆ ಸಿಎಂ ಬೊಮ್ಮಾಯಿ ಹಾಗೂ ಕಟೀಲ್ ಬಗ್ಗೆ ಅಪಾರ ಗೌರವವಿದೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಗಮನಕ್ಕೂ ಇದನ್ನು ತರಲಿದ್ದೇವೆ ಎಂದು ಹೇಳಿದರು. ನಾನು ಸರ್ಕಾರ ಅಥವಾ ಸಂಘಟನೆ ವಿರುದ್ಧವಾಗಿ ಮಾತನಾಡುತ್ತಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷದ ಶಿಸ್ತಿನ ಸಿಪಾಯಿ. ಅನೇಕ ಶಾಸಕರ ಭಾವನೆ ಇದೇ ಆಗಿದೆ. ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಐದು ನಿಮಿಷದಲ್ಲೇ ಭೇಟಿಯಾಗಿ ನಮ್ಮ ಕ್ಷೇತ್ರಗಳ ಕೆಲಸ ಕಾರ್ಯಗಳು, ಅನುದಾನ ಬಿಡುಗಡೆ ಸೇರಿದಂತೆ ಯಾವುದೇ ಕೆಲಸಕಾರ್ಯಗಳನ್ನು ಮಾಡಿಕೊಡುತ್ತಿದ್ದರು.
ಈಗಲೂ ಕೂಡ ಬೊಮ್ಮಾಯಿ ಅವರು ನಮ್ಮನ್ನು ಅಷ್ಟೇ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಆದರೆ ಕೆಲವು ದುರಾಹಂಕಾರಿ ಸಚಿವರನ್ನು ಮುಜುಗರ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕ್ಷೇತ್ರದ ಕೆಲಸವೊಂದಕ್ಕೆ ಸಂಬಂಸಿದಂತೆ ಸಚಿವರೊಬ್ಬರಿಗೆ ಕರೆ ಮಾಡಿದಾಗ ಅವರ ಆಪ್ತ ಕಾರ್ಯದರ್ಶಿ ಸಚಿವರು ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ ಎಂದು ಹೇಳಿದ್ದರು. ಅವರು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ. ಆದರೆ ಅದೇ ಸಚಿವರು ಮಾರನೆದಿನ ಸಂಪುಟ ಸಭೆಗೆ ಬಂದಿದ್ದರು ಜವಾಬ್ದಾರಿಯುತ ಸ್ಥಾನದಲ್ಲಿರುವವರು ನಡೆದುಕೊಳ್ಳುವ ರೀತಿಯೇ ಇದೇನಾ ಎಂದು ಪ್ರಶ್ನಿಸಿದರು.
2023ರಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಸರ್ಕಾರ ಮತ್ತು ಪಕ್ಷದಲ್ಲಿ ಕೆಲವು ಬದಲಾವಣೆಯಾಗಬೇಕಾದ ಅಗತ್ಯವಿದೆ. ಸಿಎಂ ಮತ್ತು ಅಧ್ಯಕ್ಷರನ್ನು ಭೇಟಿಯಾದಾಗ ಕೆಲವು ಮಾಹಿತಿಯನ್ನು ಅವರ ಗಮನಕ್ಕೆ ತಂದಿದ್ದೇನೆ. ಮಾಧ್ಯಮದ ಮುಂದೆ ಅದನ್ನು ಹೇಳಲು ಸಾಧ್ಯವಿಲ್ಲ ಎಂದರು.
ನಾನು ಯಾವುದೇ ಸಚಿವರ ಬಗ್ಗೆ ಲಿಖಿತವಾಗಿ ದೂರು ಕೊಟ್ಟಿಲ್ಲ. ಪ್ರಮುಖರನ್ನು ಭೇಟಿಯಾದಾಗ ಸಚಿವರ ವಿರುದ್ಧ ಏನು ಹೇಳಬೇಕೋ ಅದನ್ನೇ ಹೇಳಿದ್ದೇನೆ. ಎಲ್ಲ ಸಚಿವರ ಬಗ್ಗೆ ನಾನು ಮಾತನಾಡಿಲ್ಲ. ಯಾರು ಕೆಲಸ ಮಾಡಿಕೊಟ್ಟಿಲ್ಲವೋ ಅವರ ಬಗ್ಗೆ ಮಾತನಾಡಿದ್ದೇನೆ ಎಂದರು.

Articles You Might Like

Share This Article