ಕಾಂಗ್ರೆಸ್ ವಿರುದ್ಧ ರೇಣುಕಾಚಾರ್ಯ ವಾಗ್ದಳಿ

Social Share

ಬೆಂಗಳೂರು,ಫೆ.17- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಮುಸುಕಿನ ಗುದ್ದಾಟವನ್ನು ಮರೆಮಾಚಲು ಈಶ್ವರಪ್ಪ ರಾಜೀನಾಮೆ ನಾಟಕ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಡಿ.ಕೆ.ಶಿವಕುಮಾರ್ ನಾನೇ ಸಿಎಂ ಎಂದು ಹೊರಟಿದ್ದಾರೆ. ಮತ್ತೊಂದು ಕಡೆ ಸಿದ್ದರಾಮಯ್ಯ ಹೇಗಾದರೂ ಮಾಡಿ ಇದನ್ನು ತಪ್ಪಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ತಮ್ಮ ಪಕ್ಷದ ಆಂತರಿಕ ಕಚ್ಚಾಟವನ್ನು ಮುಚ್ಚಿಡಲು ಈಶ್ವರಪ್ಪ ಅವರ ರಾಜೀನಾಮೆ ನಾಟಕ ಶುರು ಮಾಡಿದ್ದಾರೆ ಎಂದು ಕಿಡಿಕಾರಿದರು.
ಯಾವುದೇ ಕಾರಣಕ್ಕೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಅವರ ಗೂಂಡಾವರ್ತನೆಯನ್ನು ಯಾರೂ ಸಹಿಸುವುದಿಲ್ಲ. ಒಬ್ಬ ಹಿರಿಯರಾಗಿ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಜ್ಞಾನವಿಲ್ಲ. ಇಂತಹವರು ಮುಖ್ಯಮಂತ್ರಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಡಿಕೆಶಿ ಬೆಳವಣಿಗೆಯನ್ನು ಸಿದ್ದರಾಮಯ್ಯ ಸಹಿಸುವುದಿಲ್ಲ. ಸಿದ್ದರಾಮಯ್ಯ ಅವರ ಬೆಳವಣಿಗೆಯನ್ನು ಡಿಕೆಶಿ ಸಹಿಸುವುದಿಲ್ಲ. ಇಬ್ಬರ ನಡುವಿನ ಸಂಘರ್ಷ ಅನೇಕ ಬಾರಿ ಬಹಿರಂಗಗೊಂಡಿದೆ. ಇದಕ್ಕೆ ತೇಪೆ ಹಚ್ಚಲು ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ರಾಜ್ಯದ ಜನತೆ ಇವರನ್ನು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ರಾಜ್ಯ ಹಾಗೂ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸಿಗರು ಗೂಂಡಾಗಿರಿ ಮಾಡುತ್ತಿದ್ದಾರೆ. ಸಚಿವ ಈಶ್ವರಪ್ಪ ನಿನ್ನೆ ಸದನದಲ್ಲಿ ಕುರ್ಚಿಯನ್ನೇ ಬಿಟ್ಟು ಹೋಗಲಿಲ್ಲ. ಆದರೆ, ಶಿವಕುಮಾರ್ ಅವರ ಪಕ್ಷದ ಶಾಸಕರು ಗೂಂಡಾಗಳಂತೆ ಈಶ್ವರಪ್ಪ ಅವರ ಬಳಿ ಬಂದು ಹಲ್ಲೆ ಮಾಡಲು ಮುಂದಾದರು. ಮೊದಲು ನೀವು ಜನತೆಯ ಕ್ಷಮೆಯಾಚಿಸಿ ಎಂದು ಒತ್ತಾಯಿಸಿದರು.
ಈಶ್ವರಪ್ಪನವರು ಏನಾದರೂ ಅಸಂಸದೀಯ ಪದ ಬಳಸಿದ್ದರೆ ಅವರು ಅಲ್ಲಿಯೇ ನಿಂತು ಉತ್ತರಿಸಬೇಕಿತ್ತು. ಆದರೆ, ಗೂಂಡಾಗಳಂತೆ ತೋಳೇರಿಸಿಕೊಂಡು ಗೂಂಡಾಗಿರಿ ಮಾಡಲು ಹೊರಟರು. ಮೊದಲು ನೀವು ಜನತೆಯ ಕ್ಷಮೆ ಕೇಳಬೇಕು ಎಂದು ತಿರುಗೇಟು ನೀಡಿದರು.
ಈ ಹಿಂದೆಯೂ ಅನೇಕ ಬಾರಿ ಶಿವಕುಮಾರ್ ಗೂಂಡಾಗಳಂತೆ ವರ್ತಿಸಿದ್ದಾರೆ. ಇವರ ವರ್ತನೆ ಹೇಗಿದೆ ಎಂಬುದನ್ನು ಜನತೆ ನೋಡಿದ್ದಾರೆ. ಒಂದು ವೇಳೆ ಇಂಥಹವರು ನಾಳೆ ಸಿಎಂ ಆದರೆ ಇಡೀ ರಾಜ್ಯವನ್ನೇ ಗೂಂಡಾರಾಜ್ಯವನ್ನಾಗಿ ಮಾಡುತ್ತಾರೆ. ಕಾಂಗ್ರೆಸ್‍ನವರಿಗೆ ನಾಚಿಕೆಯಾಗಬೇಕು. ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದು ಗುಡುಗಿದರು.
ಪ್ರತಿಪಕ್ಷದವರಾಗಿ ನೀವು ಸರ್ಕಾರಕ್ಕೆ ಸಲಹೆ ಕೊಡಬಹುದಿತ್ತು. ರಾಜ್ಯದ ಸಮಸ್ಯೆಗಳಿಗೆ ಧ್ವನಿಯಾಗಬೇಕಿತ್ತು. ಅನಗತ್ಯವಿಷಯ ಮುಂದಿಟ್ಟುಕೊಂಡು ಕಲಾಪವನ್ನು ಬಲಿ ತೆಗೆದುಕೊಂಡಿದ್ದಾರೆ. ಜನತೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಹೇಗೆ ನಡೆದುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನವೂ ಡಿಕೆಶಿಗೆ ಇಲ್ಲ. ಗೂಂಡಾಗಿರಿ ಮಾಡಿದ್ದು ಶಿವಕುಮಾರ್ ಹೊರತು ಈಶ್ವರಪ್ಪ ಅಲ್ಲ. ಮೊದಲು ಸದನದಿಂದ ಅವರನ್ನು ಅಮಾನತುಪಡಿಸಲಿ ಎಂದು ರೇಣುಕಾಚಾರ್ಯ ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದವರು ಎಂದಿಗೂ ಭಾರತ್ ಮಾತಾಕಿ ಜೈ ಎನ್ನುತ್ತಿರಲಿಲ್ಲ. ಹುಬ್ಬಳ್ಳಿಯಲ್ಲಿ ಹಿಂದುಗಳ ಮೇಲೆ ಗುಂಡು ಹಾರಿಸಿದರು. ನಾನು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ ಎಂದು ಈಶ್ವರಪ್ಪ ಹೇಳಿದರೂ ತಿರುಚುವ ಕೆಲಸ ಮಾಡಿದ್ದಾರೆ. 2023ಕ್ಕೆ ನೀವು ಸಂಪೂರ್ಣವಾಗಿ ನೆಲಕಚ್ಚಿದ್ದೀರಿ ಎಂದು ಗುಡುಗಿದರು.

Articles You Might Like

Share This Article