ಕೇವಲ ಪ್ರಚಾರಕ್ಕೋಸ್ಕರ ಆರೋಪ ಮಾಡಬೇಡಿ : ಶಿವರಾಮೇಗೌಡರಿಗೆ ಸುಮಲತಾ ತಿರುಗೇಟು

Spread the love

ಬೆಂಗಳೂರು, ಸೆ.8- ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಡ್ರಗ್ಸ್ ಮಾರಾಟವಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಬೇಕು. ಕೇವಲ ಪ್ರಚಾರಕ್ಕೋಸ್ಕರ ಇಂತಹ ಆರೋಪ ಮಾಡಬಾರದು ಎಂದು ಸಂಸದೆ ಸುಮಲತಾ ಅಂಬರೀಶ್ ಮಾಜಿ ಸಂಸದ ಎಲ್. ಆರ್.ಶಿವರಾಮೇಗೌಡ ಅವರಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನಾಗಮಂಗಲ ಇರಲಿ ಎಲ್ಲೇ ಇರಲಿ ಡ್ರಗ್ಸ್ ಮಾರಾಟವಾಗುತ್ತಿರುವುದು ಗಮನಕ್ಕೆ ಬಂದರೆ ಪೊಲೀಸರಿಗೆ ದಾಖಲೆ ಕೊಡಬೇಕು. ಮಾಧ್ಯಮಗಳ ಮುಂದೆ ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ ಸುಳ್ಳು ಆರೋಪ ಮಾಡಬಾರದು ಎಂದು ಹರಿಹಾಯ್ದರು.

ಶಿವರಾಮೇಗೌಡರ ಬಳಿ ದಾಖಲೆಗಳಿದ್ದರೆ ಪೊಲೀಸರಿಗೆ ಮಾಹಿತಿ ನೀಡಲು ಮೀನಾಮೇಷವೇಕೆ ? ಸಾಕ್ಷಿ ಸಮೇತ ಇದನ್ನು ಸಾಬೀತುಪಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸುಮ್ಮನೆ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಇನ್ನು ಸ್ಯಾಂಡಲ್‍ವುಡ್‍ನಲ್ಲಿ ಕೇಳಿ ಬರುತ್ತಿರುವ ಡ್ರಗ್ಸ್ ಕುರಿತಂತೆ ಪ್ರತಿಕ್ರಿಯಿಸಿದ ಸುಮಲತಾ, ಇದರಲ್ಲಿ ಯಾರೇ ಇದ್ದರೂ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಕನ್ನಡ ಚಿತ್ರರಂಗದವರೇ ಭಾಗಿಯಾ ಗುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ. ತಪ್ಪು ಯಾರೇ ಮಾಡಿದರೂ ಅದು ತಪ್ಪೇ ಎಂದು ಅಭಿಪ್ರಾಯಪಟ್ಟರು.

ಒಮ್ಮೆ ಮಾದಕ ಸೇವನೆಗೆ ಅಂಟಿಕೊಂಡರೆ ಅದರಿಂದ ಹೊರ ಬರುವುದು ಅಷ್ಟು ಸುಲಭವಲ್ಲ. ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು.

ಈಗಾಗಲೇ ಪೊಲೀಸರು ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಕೇವಲ ಚಿತ್ರರಂಗವನ್ನೇ ಗುರಿಯಾಗಿಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ. ಡ್ರಗ್ಸ್ ಸೇವನೆ ಮಾಡುವವರು ಎಲ್ಲಾ ಕಡೆಯೂ ಇದ್ದಾರೆ.

ಒಂದಿಬ್ಬರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡುವುದು ಸರಿಯಲ್ಲ. ಯುವ ಜನತೆ ಇಂತಹ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕಾದದ್ದು ನಾಗರಿಕ ಸಮಾಜದ ಜವಾಬ್ದಾರಿ ಎಂದು ಸುಮಲತಾ ತಿಳಿಸಿದರು.

Facebook Comments