ಕುತೂಹಲ ಕೆರಳಿಸಿದ ಸುಮಲತಾ ನಡೆ

Social Share

ಬೆಂಗಳೂರು,ಜ.30- ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರಾ ಅಥವಾ ಬಿಜೆಪಿ ಕೈ ಹಿಡಿಯುತ್ತಾರಾ? ಎಂಬುವುದರ ಕುರಿತಾಗಿ ಹಲವು ಊಹಾಪೋಹಗಳು ಹರಿದಾಡುತ್ತಿವೆ.

ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸುಮಲತಾ ಅಂಬರೀಶ್ ಕಾಂಗ್ರೆಸ್ ಸೇರ್ಪಡೆಗೆ ಯತ್ನಿಸಿದರೂ ಕಾರಣಾಂತರಗಳಿಂದ ಅದು ಸಾಧ್ಯವಾಗದೇ ಇದ್ದಾಗ ಬಿಜೆಪಿಗೆ ಕಡೆ ವಾಲುತ್ತಿದ್ದಾರೆ ಎಂಬ ಬಗ್ಗೆ ದಟ್ಟ ವದಂತಿ ಎದ್ದಿದೆ.

ಇದಕ್ಕೆ ಪೂರಕ ಎಂಬಂತೆ ಕೇಂದ್ರ ಸಚಿವ ಅಮಿತ್ ಶಾ ಮಂಡ್ಯ ಭೇಟಿ ಸಂದರ್ಭದಲ್ಲಿ ಸುಮಲತಾ ಅಂಬರೀಶ್‍ರ ಫೋಟೋ ಇರುವ ಸ್ವಾಗತ ಬ್ಯಾನರ್‍ಗಳು ಇನ್ನಷ್ಟು ಪುಷ್ಠಿ ನೀಡಿವೆ. ಆದರೆ ಸುಮಲತಾ ಆಪ್ತ ಮೂಲಗಳ ಪ್ರಕಾರ ಸದ್ಯಕ್ಕೆ ಯಾವುದೇ ನಿರ್ಧಾರವನ್ನು ಅವರು ಕೈಗೊಳ್ಳದೆ ತಟಸ್ಥವಾಗಿದ್ದಾರೆ ಎನ್ನಲಾಗುತ್ತಿದೆ.

ಸುಮಲತಾ ಅಂಬರೀಶ್ ಅವರು ರಾಜಕೀಯ ಪ್ರವೇಶಕ್ಕೆ ಮೊದಲು ಪ್ರಯತ್ನ ಪಟ್ಟಿದ್ದು ಕಾಂಗ್ರೆಸ್ ಮೂಲಕವೇ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಡ್ಯದಿಂದ ಕಾಂಗ್ರೆಸ್‍ನಿಂದ ಕಣಕ್ಕಿಳಿಯಲು ಪ್ರಯತ್ನಿಸಿದ್ದರು. ಇದಕ್ಕಾಗಿ ಅಂದಿನ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯಯವರನ್ನು ಭೇಟಿ ಮಾಡಿದ್ದರು.

ಕಾಶ್ಮೀರದ ಹಿಮಸೌಂದರ್ಯಕ್ಕೆ ಮಾರುಹೋದ ಕಾಂಗ್ರೆಸ್ ನಾಯಕರು

ಆದರೆ ಸಮ್ಮಿಶ್ರ ಅಭ್ಯರ್ಥಿಯಾಗಿ ನಿಖಿಲ್ ಕಣಕ್ಕಿಳಿದಿದ್ದರಿಂದ ಪಕ್ಷೇತರವಾಗಿ ಮಂಡ್ಯದಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಕುತೂಹಲ ಎಂದರೆ ಸುಮಲತಾ ಗೆಲುವಿಗೆ ಅಂಬರೀಶ್ ಅಭಿಮಾನಿಗಳು ಪಕ್ಷ ಬೇಧವಿಲ್ಲದೆ ಸಹಕಾರ ನೀಡಿದ್ದರು. ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಮುಖಂಡರೂ ಸಂಪೂರ್ಣ ಬೆಂಬಲ ನೀಡಿದ್ದರು. ಈ ಎಲ್ಲದರ ಪರಿಣಾಮ ಅಭೂತಪೂರ್ವ ಗೆಲುವು ಸಾಧಿಸಿದರು.

ಪಕ್ಷೇತರವಾಗಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ಕಾಂಗ್ರೆಸ್ ಪಕ್ಷದತ್ತ ಒಲವು ಹೊಂದಿದ್ದರು. ಆದರೆ ಪಕ್ಷ ಸೇರ್ಪಡೆಗೆ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ವಿರೋಧ ಇದೆ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸುಮಲತಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಬಹಿರಂಗ ವಾಕ್ಸಮರ ನಡೆದಿತ್ತು. ಕಾಂಗ್ರೆಸ್ ಸೇರುವ ಬಯಕೆಗೆ ಡಿ.ಕೆ.ಶಿವಕುಮಾರ್ ತಡೆಯೊಡ್ಡಿದ್ದರು ಎಂದು ಸುಮಲತಾ ಹೇಳಿಕೆ ನೀಡಿದ್ದರು.

ಸುಮಲತಾ ಬಿಜೆಪಿಗೆ ಸೇರ್ಪಡೆ ಆಗುತ್ತಾರಾ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿ ಇರುವುದರಿಂದ ಪಕ್ಷ ಸೇರ್ಪಡೆ ಆದರೆ ಅವರ ರಾಜಕೀಯ ಭವಿಷ್ಯ ಹಾಗೂ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅನುಕೂಲ ಆಗಲಿದೆ ಎಂಬುವುದು ಒಂದು ವಾದ. ಆದರೆ ಸೈದ್ದಾಂತಿಕವಾಗಿ ಮಂಡ್ಯದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ಇಲ್ಲ.

ಇಂತಹ ಸಂದರ್ಭದಲ್ಲಿ ಪಕ್ಷೇತರವಾಗಿ ಸುಮಲತಾ ಅಂಬರೀಶ್ ಅವರಿಗೆ ಸಿಕ್ಕ ಬೆಂಬಲ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರೆ ಸಿಗುವುದು ಅಸಾಧ್ಯ ಎಂಬ ಅಭಿಪ್ರಾಯವೂ ಇದೆ. ಈ ನಿಟ್ಟಿನಲ್ಲಿ ಅವರು ಕಮಲ ಮುಡಿಯಲು ಮನಸ್ಸು ಮಾಡುತ್ತಿಲ್ಲ ಎಂಬ ಮಾತೂ ಇದೆ.

ಹೀಗಿದ್ದರೂ ಹಲವು ಬಿಜೆಪಿ ನಾಯಕರು ಅವರನ್ನು ಭೇಟಿ ಮಾಡಿ ಬಿಜೆಪಿ ಪಕ್ಷಕ್ಕೆ ಆಹ್ವಾನ ನೀಡಿದ್ದರು. ಒಂದು ತಿಂಗಳ ಹಿಂದೆಯೇ ಸಚಿವ ಆರ್. ಅಶೋಕ್ ಕೂಡಾ ಸುಮಲತಾ ಅಂಬರೀಶ್ ಅವರನ್ನು ಭೇಟಿ ಮಾಡಿ ಬಿಜೆಪಿಗೆ ಆಹ್ವಾನ ನೀಡಿದ್ದರು. ಆದರೆ ಅವರು ಕಮಲ ಸೇರ್ಪಡೆಯ ಬಗ್ಗೆ ಹೆಚ್ಚಿನ ಒಲವನ್ನು ತೋರಿಸಿಲ್ಲ ಎಂಬುವುದು ಆರ್. ಅಶೋಕ್ ಆಪ್ತ ಮೂಲಗಳ ಮಾಹಿತಿ. ಈ ನಿಟ್ಟಿನಲ್ಲಿ ಅವರ ಮುಂದಿನ ರಾಜಕೀಯ ನಡೆಯೂ ಕುತೂಹಲಕ್ಕೆ ಕಾರಣವಾಗಿದೆ.

ಸುಮಲತಾ ಅಂಬರೀಶ್ ಅವರು ಸದ್ಯಕ್ಕೆ ಯಾವುದೇ ನಿರ್ಧಾರವನ್ನು ಘೋಷಣೆ ಮಾಡಲು ನಿರ್ಧಾರ ಮಾಡಿಲ್ಲ. ರಾಜ್ಯ ವಿಧಾನಸಭೆ ಚುನಾವಣೆಯ ಬಳಿಕ ಒಂದು ನಿರ್ಧಾರಕ್ಕೆ ಬಂದರೆ ಉತ್ತಮ ಎಂಬ ಅಭಿಪ್ರಾಯನ್ನೂ ಅವರ ಆಪ್ತ ಮೂಲಗಳು ನೀಡಿವೆ ಎನ್ನಲಾಗಿದೆ.

ರಾಮನ ಹೆಸರಿನಲ್ಲಿ ಲಾಭ ಪಡೆಯಲು ಎಸ್‍ಪಿ ಷಡ್ಯಂತ್ರ ; ಮಾಯಾವತಿ

ಸುಮಲತಾ ಯಾವುದೇ ನಿರ್ಧಾರ ಕೈಗೊಳ್ಳುದಾದರೂ ಅದರ ಹಿಂದೆ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಇರುತ್ತದೆ. ಪುತ್ರನ ರಾಜಕೀಯ ಭವಿಷ್ಯ ಒಂದು ಕಡೆಯಾದರೆ ಅವರ ರಾಜಕೀಯ ಭವಿಷ್ಯವೂ ಅವರ ನಿರ್ಧಾರದ ಹಿಂದೆ ಅಡಗಿದೆ.

ಪುತ್ರನಿಗೆ ಮದ್ದೂರು ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಲು ಪ್ರಯತ್ನವನ್ನು ನಡೆಸುತ್ತಿದ್ದಾರೆ ಸುಮಲತಾ. ಇದಕ್ಕಾಗಿ ಬಿಜೆಪಿ ಕೈ ಹಿಡಿದರೆ ಮಂಡ್ಯದಲ್ಲಿ ರಾಜಕೀಯ ಭವಿಷ್ಯ ಅಷ್ಟೇನು ಸುಲಭವಲ್ಲ. ಬಿಜೆಪಿಗೆ ತಳಮಟ್ಟದಲ್ಲಿ ಜಿಲ್ಲೆಯಲ್ಲಿ ಯಾವುದೇ ಗಟ್ಟಿ ನೆಲೆ ಇಲ್ಲ. ಇಂತಹ ಸಂದರ್ಭದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಅವರು ಇಡಬೇಕಾಗುತ್ತದೆ.

ಕನ್ನಡ ಹಾಡು ಹಾಡದ ಕೈಲಾಷ್ ಖೇರ್ ಮೇಲೆ ಬಾಟಲಿ ದಾಳಿ

ಇತ್ತ ಮಂಡ್ಯದಲ್ಲಿ ಕಾಂಗ್ರೆಸ್‍ಗೆ ತಕ್ಕ ಮಟ್ಟದಲ್ಲಿ ನೆಲೆ ಇದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಚಿತ್ತ ನೆಟ್ಟರೂ ಡಿ.ಕೆ.ಶಿವಕುಮಾರ್ ಬಣದಿಂದ ಬೆಂಬಲ ಸಿಗುವ ಸಾಧ್ಯತೆ ಇಲ್ಲ. ಇಂತಹ ಸಂದರ್ಭದಲ್ಲಿ ಅವರ ಕೈ ಹಿಡಿಯುವುದು ಪಕ್ಷೇತರ ಸ್ವಾಭಿಮಾನ. ಈ ಎಲ್ಲಾ ನಿಟ್ಟಿನ ಲೆಕ್ಕಾಚಾರ ಇಟ್ಟುಕೊಂಡು ಅವರು ತಮ್ಮ ಮುಂದಿನ ಹೆಜ್ಜೆ ಇಡುವ ಸಾಧ್ಯತೆ ದಟ್ಟವಾಗಿವಾಗಿದೆ.

MP Sumalatha Ambarish, join, BJP, soon,

Articles You Might Like

Share This Article