ಮುಂಬೈ, ಆ.20- ಮುಂಬೈ ಮಾದರಿಯಲ್ಲಿ ದಾಳಿ ಮಾಡುವುದಾಗಿ ಪೊಲೀಸ್ ಕಂಟ್ರೋಲ್ ರೂಂನ ವಾಟ್ಸ್‍ಅಪ್‍ಗೆ ನೆರೆಯ ದೇಶದಿಂದ ಬೆದರಿಕೆಯ ಸಂದೇಶ ಬಂದಿದ್ದು, ಆತಂಕ ಸೃಷ್ಟಿಯಾಗಿದೆ.
ಮುಂಬೈ ಪೊಲೀಸ್‍ನ ಸಂಚಾರ ವಿಭಾಗದ ಹೆಲ್ಪ್‍ಲೈನ್‍ಗೆ ಬಂದಿರುವ ಸರಣಿ ಸಂದೇಶಗಳಲ್ಲಿ ಬೆದರಿಕೆ ಹಾಕಲಾಗಿದೆ. ಮೇಲ್ನೋಟಕ್ಕೆ ಈ ಸಂದೇಶ ಪಾಕಿಸ್ತಾನದಿಂದ ಬಂದಿರುವ ಮಾಹಿತಿ ಇದೆ. ಮೊಬೈಲ್ ಸಂಖ್ಯೆಯನ್ನು ಬದಲು ಮಾಡಿ, ಇಂಟರ್‍ನೆಟ್ ಮೂಲಕ ಸಂದೇಶ ಕಳುಹಿಸಲಾಗಿದೆ.
ಅದರಲ್ಲಿ 26/11 ಮಾದರಿಯಲ್ಲಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ. ವರ್ಲಿಯಲ್ಲಿನ ನಿಯಂತ್ರಣ ಕೊಠಡಿಯಲ್ಲಿ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸಂದೇಶ ಸ್ವೀಕಾರ್ಹವಾಗಿದೆ. ಸಂದೇಶವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕ್ರೈಮ್ ಬ್ರಾಂಚ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
2008ರ ನವೆಂಬರ್ 26ರಂದು ಪಾಕಿಸ್ತಾನ ಮೂಲದ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿ, 166 ಮಂದಿಯನ್ನು ಹತ್ಯೆ ಮಾಡಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಕರಾಳ ಘಟನೆ ಮತ್ತೆ ಮರುಕಳಿಸಲಿದೆ ಎಂಬ ಮಾದರಿಯಲ್ಲಿ ಬೆದರಿಕೆ ಹಾಕಲಾಗಿದೆ.