ಬೆಂಗಳೂರು,ಜು.15- ಮಾರತಹಳ್ಳಿ ಲಾರ್ಡ್ಜ್ ವೊಂದರಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣವನ್ನು ಬಯಲಿಗೆಳೆದಿರುವ ಪೊಲೀಸರು ತಮಿಳುನಾಡು ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ಸಲಿಂಗಕಾಮಿಗಳ ನಡುವೆ ಉಂಟಾಗಿರುವ ಕಲಹದಲ್ಲಿ ಕೊಲೆ ನಡೆದಿದೆ ಎಂಬ ಸಂಗತಿಯನ್ನು ಪೊಲೀಸರು ಬಯಲಿಗೆಳೆದು, ತಮಿಳು ವಣ್ಣನ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ:
ಕಳೆದ ಜು.7 ರಂದು ಮಾರತಹಳ್ಳಿ ಲಾರ್ಡ್ಜ್ ನಲ್ಲಿ ಯವಕನ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಕೊಲೆಯಾದ ಯುವಕನನ್ನು ತಮಿಳುನಾಡು ಮೂಲದ ರಾಜಗೋಪಾಲ್ (24)ಎಂದು ಗುರುತಿಸಿದ್ದರು. ರಾಜಗೋಪಾಲ್ ಮತ್ತು ತಮಿಳು ವಣ್ಣನ್ ನಡುವೆ ಸಲಿಂಗಕಾಮ ಸಂಬಂಧವಿದ್ದು ಕಳೆದ ಜುಲೈ 4ರಂದು ರಾಜಗೋಪಾಲ, ಮಾರತಹಳ್ಳಿಯ ರಿಲ್ಯಾಕ್ಸ್ ಪೊನಲ್ಲಿ ಎರಡು ದಿನಕ್ಕೆ ರೂಂ ಬುಕ್ ಮಾಡಿದ್ದ. ತಮಿಳುವಣ್ಣನ್ ಸಹ ಜೊತೆಗೆ ಬಂದಿದ್ದ.
ಎರಡು ದಿನದ ಬಳಿಕ ರೂಂ ರಿನೀವಲ್ ಮಾಡದ ಕಾರಣ ಅನುಮಾನಗೊಂಡ ಲಾರ್ಡ್ಜ್ ಸಿಬ್ಬಂದಿ ಕೋಣೆಯನ್ನು ಪರಿಶೀಲಿಸಿದಾಗ ರಾಜಗೋಪಾಲ್ ಶವ ಪತ್ತೆಯಾಗಿತ್ತು. ತಕ್ಷಣ ಲಾರ್ಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಮರಣೋತ್ತರ ಪರೀಕ್ಷೆ ಬಳಿಕ ಕುತ್ತಿಗೆ ಹಿಸುಕಿ ಉಸಿರು ಗಟ್ಟಿಸಿ ಕೊಲೆಯಾಗಿದೆ ಎಂಬುದು ಬಯಲಾಗಿತ್ತು. ರೂಮಿನಲ್ಲಿದ್ದಾಗ ಇಬ್ಬರ ನಡುವೆ ಜಗಳ ನಡೆದಿದ್ದು ರಾಜಗೋಪಾಲ್‍ನ ಕತ್ತು ಹಿಸುಕಿ ಕೊಲೆ ಮಾಡಿ ತಮಿಳು ವಣ್ಣನ್ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿ ಮಾರತ್ತಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.