ಬೆಂಗಳೂರು, ಜು.28- ಸ್ನೇಹಿತರೆಲ್ಲ ರಾತ್ರಿ ಮದ್ಯ ಸೇವಿಸಿ ಊಟ ಮಾಡಿದ್ದು, ನಂತರ ಮದ್ಯದ ವಿಚಾರವಾಗಿ ಜಗಳ ನಡೆದು ಹೂವಿನ ವ್ಯಾಪಾರಿಯನ್ನು ಕೊಲೆ ಮಾಡಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ನಡೆದಿದೆ.
ಬನಶಂಕರಿಯ ಕದಿರೇನಹಳ್ಳಿ ನಿವಾಸಿ ಪ್ರಶಾಂತ್ (30) ಕೊಲೆಯಾದ ಹೂವಿನ ವ್ಯಾಪಾರಿ.
ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದ ತರಕಾರಿ ಮಾರುಕಟ್ಟೆ ಜಾಗದಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಪ್ರಶಾಂತ್, ಬಿಡುವಿನ ವೇಳೆಯಲ್ಲಿ ವೆಲ್ಡಿಂಗ್ ಕೆಲಸ ಸಹ ಮಾಡುತ್ತಿದ್ದನು. ರಾತ್ರಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಊಟ ಮಾಡಿದ್ದಾರೆ. ಮಧ್ಯರಾತ್ರಿ 12.30ರ ಸುಮಾರಿನಲ್ಲಿ ಮದ್ಯದ ವಿಚಾರವಾಗಿ ಅವರುಗಳ ಮಧ್ಯೆ ಜಗಳವಾಗಿದೆ. ಆ ಸಂದರ್ಭದಲ್ಲಿ ಜತೆಯಲ್ಲಿದ್ದವರು ಬಾಟಲಿಯಿಂದ ಹಲ್ಲೆ ಮಾಡಿ, ಕೈಗೆ ಸಿಕ್ಕಿದ ಮರದ ಪೆಟ್ಟಿಗೆಗಳಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಶಾಂತ್ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮದ್ಯದ ವಿಚಾರಕ್ಕೆ ಜಗಳ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಆರೋಪಿಗಳು ತಮಿಳುನಾಡಿಗೆ ಹೋಗಿ ತಲೆಮರೆಸಿಕೊಂಡಿರುವ ಶಂಕೆ ಹಿನ್ನೆಲೆಯಲ್ಲಿ ಒಂದು ತಂಡ ಅಲ್ಲಿಗೆ ಹೋಗಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.