ಬೆಂಗಳೂರು, ಫೆ.15- ಮೊಬೈಲ್ ವಿಚಾರಕ್ಕೆ ನಡೆದ ಜಗಳದಲ್ಲಿ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಜಂಬು ಸವಾರಿ ದಿಣ್ಣೆ ನಿವಾಸಿ ಮಂಜುನಾಥ್ (36) ಕೊಲೆಯಾದ ವ್ಯಕ್ತಿ.
ವೈನ್‍ಸ್ಟೋರ್‍ವೊಂದರಲ್ಲಿ ಈ ಹಿಂದೆ ಮಂಜುನಾಥ್ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟಿದ್ದನು.
ರಾತ್ರಿ 11 ಗಂಟೆ ಸುಮಾರಿನಲ್ಲಿ ಮಂಜುನಾಥ್ ಮದ್ಯಪಾನ ಮಾಡಿ ಮನೆಗೆ ಹೋಗುತ್ತಿದ್ದಾಗ ಅದೇ ರಸ್ತೆಯಲ್ಲಿ ನಡೆದು ಬರುತ್ತಿದ್ದ ಸ್ನೇಹಿತ ಶರತ್‍ಕುಮಾರ್ (27) ಎದುರಿಗೆ ಸಿಕ್ಕಿ ಮಾತನಾಡಿಸಿದ್ದಾನೆ. ಆ ವೇಳೆ ಮಂಜುನಾಥ್ ಮೊಬೈಲ್ ಕೊಡುವಂತೆ ಶರತ್‍ನನ್ನು ಕೇಳಿದ್ದಾನೆ. ನಾನೇಕೆ ಕೊಡಬೇಕು ಎಂದಾಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ಕೋಪದಲ್ಲಿ ಮಂಜುನಾಥ್ ರಸ್ತೆಯಲ್ಲಿ ಬಿದ್ದಿದ್ದ ಸಿಮೆಂಟ್ ಇಟ್ಟಿಗೆಯಿಂದ ಶರತ್‍ಗೆ ಹೊಡೆಯಲು ಹೋದಾಗ, ಅದೇ ಇಟ್ಟಿಗೆಯನ್ನು ಶರತ್ ಕಿತ್ತುಕೊಂಡು ಮಂಜುನಾಥ್ ತಲೆಗೆ ಹೊಡೆದಿದ್ದಾನೆ. ಗಂಭೀರ ಗಾಯಗೊಂಡು ಮಂಜುನಾಥ್ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಕೋಣನಕುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಶರತ್‍ಕುಮಾರ್ (27)ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
