21ಗುಂಟೆ ಜಮೀನಿಗಾಗಿ ನಡೆಯಿತು ಮರ್ಡರ್ : ಮಗ, ಪತ್ನಿ ಸೇರಿ ಐವರ ಸೆರೆ

Social Share

ಬೆಂಗಳೂರು, ಫೆ.3- ಮಗನ ಹೆಸರಿಗೆ ಜಮೀನು ಬರೆದುಕೊಡಲು ನಿರಾಕರಿಸಿದ ಪತಿ ಚನ್ನಿಗರಾಯಪ್ಪನನ್ನು ಕೊಲೆ ಮಾಡಿ ಶವ ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ, ಮಗ ಸೇರಿ ಐದು ಮಂದಿ ಆರೋಪಿಗಳನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಶೋಭಾ ಅಲಿಯಾಸ್ ಯಶೋಧಾ (33), ಮಗ ನಿಖಿಲ್ ಅಲಿಯಾಸ್ ಅಭಿ (22) ಮತ್ತು ಗುರುಕಿರಣ್ (21), ವಿಶ್ವಾಸ್ (20), ಮಂಜುನಾಥ್ (29) ಬಂಧಿತ ಆರೋಪಿಗಳು.
ಕೊರಟಗೆರೆ ತಾಲ್ಲೂಕು ಪಣ್ಣೇನಹಳ್ಳಿ ನಿವಾಸಿಯಾದ ಚನ್ನಿಗರಾಯಪ್ಪನಿಗೆ 21 ಗುಂಟೆ ಕೃಷಿ ಭೂಮಿ ಇದ್ದು, ಈತನಿಗೆ 24 ವರ್ಷಗಳ ಹಿಂದೆ ಯಶೋಧಾ ಜತೆ ಮದುವೆಯಾಗಿದ್ದು, ನಿಖಿಲ್ ಎಂಬ ಗಂಡುಮಗನಿದ್ದಾನೆ. 20 ವರ್ಷಗಳ ಹಿಂದೆ ಎಚ್‍ಎಸ್‍ಆರ್ ಲೇಔಟ್, ಗಾರೆಬಾವಿ ಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ಯಶೋಧಾ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಮಗನೊಂದಿಗೆ ವಾಸವಾಗಿದ್ದರು.
ಮಗ ನಿಖಿಲ್ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದನು. ಪತಿ ಚನ್ನಿಗರಾಯಪ್ಪ ಎರಡನೆ ಮದುವೆಯಾಗಿದ್ದು, ಕೊರಟಗೆರೆ ತಾಲ್ಲೂಕಿನ ಪಣ್ಣೇನಹಳ್ಳಿಯಲ್ಲಿರುವ 21 ಗುಂಟೆ ಜಮೀನು ಮಾರುವ ವಿಚಾರ ಯಶೋಧಾಗೆ ಗೊತ್ತಾಗಿದೆ.
ಈ ವಿಚಾರವಾಗಿ ತನ್ನ ಮಗ ನಿಖಿಲ್‍ಗೆ ಜಮೀನು ಮಾಡಿಕೊಡುವಂತೆ ಕೇಳಿದಾಗ ಪತಿ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಯಶೋಧಾ ತನ್ನ ಸ್ನೇಹಿತ ಮಂಜುನಾಥ್ ಮತ್ತು ಮಗ ನಿಖಿಲ್‍ನೊಂದಿಗೆ ಬೆಂಗಳೂರಿನಿಂದ ಕಾರಿನಲ್ಲಿ ಹೋಗಿ ತೊಂಡೆಗೆರೆಯಿಂದ ಚನ್ನಿಗರಾಯಪ್ಪನನ್ನು ಅಪಹರಿಸಿಕೊಂಡು ನಗರದ ಎಚ್‍ಎಸ್‍ಆರ್ ಲೇಔಟ್, ಗಾರೆಬಾವಿ ಪಾಳ್ಯದ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಅಲ್ಲಿಯೂ ಜಮೀನನ್ನು ಮಗನ ಹೆಸರಿಗೆ ಬರೆದುಕೊಡುವಂತೆ ಕೇಳಿದಾಗ ಆತ ಅದಕ್ಕೆ ಒಪ್ಪುವುದಿಲ್ಲ. ತಂದೆಯ ನಡತೆಯಿಂದ ಬೇಸತ್ತ ಮಗ ನಿಖಿಲ್ ಕಗ್ಗಲೀಪುರದ ತನ್ನ ಸ್ನೇಹಿತರಾದ ಗುರುಕಿರಣ್, ವಿಶ್ವಾಸ್ ಸಹಾಯದಿಂದ ಚನ್ನಿಗರಾಯಪ್ಪನಿಗೆ ಮದ್ಯಪಾನ ಮಾಡಿಸಿ ಕಗ್ಗಲಿಪುರ ರಸ್ತೆಯ ಬ್ಯಾಟರಾಯನದೊಡ್ಡಿ ನಿರ್ಜನ ಪ್ರದೇಶದಲ್ಲಿರುವ ಕೆರೆಕೋಡಿ ಬಳಿ ಕರೆದುಕೊಂಡು ಹೋಗಿ ಅಲ್ಲಿಯೂ ಕುಡಿಸಿ ಸ್ನೇಹಿತರ ಸಹಾಯದಿಂದ ಕೈ-ಬಾಯಿ ಕಟ್ಟಿಹಾಕಿ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.
ಮೃತದೇಹದ ಗುರುತು ಸಿಗಬಾರದೆಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಾಪಸಾಗಿದ್ದರು. ಕೆರೆಕೋಡಿ ಬಳಿ ಸುಟ್ಟು ಕರಕಲಾಗಿದ್ದ ಗಂಡಸಿನ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಡಿವೈಎಸ್‍ಪಿ ಮಲ್ಲೇಶ್, ವೃತ್ತ ನಿರೀಕ್ಷಕ ಮಹಾನಂದ, ಬನ್ನೇರುಘಟ್ಟ ಠಾಣೆ ಪಿಎಸ್‍ಐ ಅಂಜನ್‍ಕುಮಾರ್ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ಕೈಗೊಂಡು ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಿ ನಂತರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article