ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ತಡರಾತ್ರಿ ಡಬಲ್ ಮರ್ಡರ್

ತುಮಕೂರು,ಏ.22- ತಡರಾತ್ರಿ ಇಬ್ಬರು ಯುವಕರನ್ನು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೆದ್ದನಹಳ್ಳಿ ದಲಿತ ಕಾಲೋನಿ ನಿವಾಸಿ ಗಿರೀಶ್ ಹಾಗೂ ಕಲ್ಲೂರು ಕ್ರಾಸ್‍ನ ಮತ್ತೊಬ್ಬ ಯುವಕನನ್ನು ಹತ್ಯೆ ಮಾಡಲಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಪೆದ್ದನಹಳ್ಳಿಯ ತೋಟದ ಮಧ್ಯೆಇರುವ ಹೊಂಡದಲ್ಲಿ ಒಬ್ಬನ ಶವ ಹಾಗೂ ದಾರಿ ಮಧ್ಯೆ ಮತ್ತೊಬ್ಬನ ಶವಪತ್ತೆಯಾಗಿದೆ. ತಡರಾತ್ರಿ ಈ ಇಬ್ಬರನ್ನು ಹತ್ಯೆ ಮಾಡಲಾಗಿದ್ದು, ಇಂದು ಮುಂಜಾನೆ ದಾರಿ ಹೋಕರು ನೋಡಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಗುಬ್ಬಿ ಪಿಎಸ್‍ಐ ನಟರಾಜು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳ್ಳತನಕ್ಕೆ ಯತ್ನ ಶಂಕೆ: ತೋಟದಲ್ಲಿರುವ ಕೊಳವೆಬಾವಿ ಪಂಪ್ ಸೆಟ್‍ಗಳನ್ನು ಕದಿಯಲು ಬಂದಿದ್ದಾಗ ಇಬ್ಬರು ಯುವಕರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳ್ಳತನಕ್ಕೆ ಬಂದಿದ್ದ ಗುಂಪಿನಲ್ಲಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಆ ಇಬ್ಬರು ಪತ್ತೆಯಾದ ನಂತರವಷ್ಟೇ ಯುವಕರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ. ಪ್ರಕರಣ ದಾಖಲಿಸಿಕೊಂಡಿರುವ ಗುಬ್ಬಿ ಠಾಣೆ ಪೊಲೀಸರು ಕೊಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.