ಮುರುಘಾ ಶ್ರೀಗಳ ಪದಚ್ಯುತಿಗೆ ಹೆಚ್ಚಿದ ಒತ್ತಡ..

Social Share

ಬೆಂಗಳೂರು,ಅ.15- ಪೋಕ್ಸೋ ಕಾಯ್ದೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಮುರುಘ ರಾಜೇಂದ್ರ ಶರಣರನ್ನು ಪೀಠಾಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿ ಪರ್ಯಾಯ ಪೀಠಾಧ್ಯಕ್ಷರ ನೇಮಕಕ್ಕೆ ತಯಾರಿಗಳು ನಡೆಯುತ್ತಿವೆ.

ಮುರುಘಾ ಶ್ರೀಗಳ ವಿರುದ್ಧ ದಿನಕ್ಕೊಂದು ನಂಬಲು ಅಸಾಧ್ಯವಾದ ಲೈಂಗಿಕ ಪ್ರಕರಣಗಳು ಹೊರ ಬರುತ್ತಿರುವ ಹಿನ್ನೆಲೆಯಲ್ಲಿ ಪೀಠದಿಂದ ಅವರನ್ನು ವಜಾಗೊಳಿಸಿ, ಹೊಸಬರನ್ನು ಪೀಠಾಧ್ಯಕ್ಷರನ್ನಾಗಿ ನೇಮಿಸಲು ಮಠದ ಹಾಗೂ ಸಾಮಾಜಿಕ ಒತ್ತಡ ಹೆಚ್ಚಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವ ಚಿತ್ರದುರ್ಗ ಮುರುಘಾ ಮಠದ ಆಡಳಿತಾಧಿಕಾರಿಗಳು ಹೊಸ ಪೀಠಾಧ್ಯಕ್ಷರನ್ನು ನೇಮಿಸಲು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.

ಈ ಘಟನೆಯಿಂದಾಗಿ ಶತಮಾನಗಳ ಇತಿಹಾಸವಿರುವ ಮುರುಘಾ ಮಠದ ನಂಬಿಕೆ ಮತ್ತು ಧಾರ್ಮಿಕ ಪರಂಪರೆಯ ವಿಶ್ವಾಸಕ್ಕೆ ಆಘಾತ ಉಂಟಾಗಿದೆ. ತಕ್ಷಣವೇ ಹೊಸ ಶ್ರೀಗಳ ಹೆಸರನ್ನು ಪರಿಶೀಲಿಸಬೇಕೆಂದು ನಿಯೋಗ ಮನವಿ ಮಾಡಿಕೊಂಡಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಠದ ಭಕ್ತರು ಹಾಗೂ, ಮಾಜಿ ಶಾಸಕರು ಸೇರಿದಂತೆ ಅನೇಕರು ನನ್ನನ್ನು ಭೇಟಿಯಾಗಿ ಅಲ್ಲಿನ ಪ್ರಸಕ್ತ ವಿದ್ಯಮಾನಗಳು ನನ್ನ ಗಮನಕ್ಕೆ ತಂದಿದ್ದಾರೆ.

ಈ ಘಟನೆ ನಡೆದ ಬಳಿಕ ಮಠದಲ್ಲಿ ಉಂಟಾಗಿರುವ ಬೆಳವಣಿಗೆಗಳು ಸೇರಿದಂತೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಡಳಿತ ವಿಚಾರದಲ್ಲಿ ಆಗಿರುವ ಸಮಸ್ಯೆಯನ್ನು ಮನವರಿಕೆ ಮಾಡಿದ್ದಾರೆ ಎಂದರು.
ಮಠದಲ್ಲಿ ಒಂದು ಟ್ರಸ್ಟ್ ಇದೆ. ಏನೇ ಕ್ರಮಗಳಾಗಬೇಕಾದರೂ ಕಾನೂನಿನ ಪ್ರಕಾರವೇ ಆಗಬೇಕು. ನಾವು ಇದರ ವ್ಯಾಪ್ತಿಯಲ್ಲಿ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ. ಅಂತಿಮ ಕಾನೂನು ಚೌಕಟ್ಟಿನೊಳಗೆ ಮುಂದಿನ ಕ್ರಮಗಳು ನಡೆಯಲಿವೆ ಎಂಬ ಸುಳಿವು ನೀಡಿದ್ದಾರೆ.

ರಾಯಚೂರಿನಲ್ಲಿ ಈ ಬಗ್ಗೆ ಸುಳಿವು ನೀಡಿರುವ ಕಂದಾಯ ಸಚಿವ ಅರ್.ಅಶೋಕ್ ಅವರು, ಮುರುಘಾ ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ಬಂದಿರುವುದು ನಿಜ. ಶೀಘ್ರದಲ್ಲೇ ಸರ್ಕಾರ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಮಠದ ವಿಷಯದಲ್ಲಿ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ. ಆದರೆ ಸಮುದಾಯದ ಮುಖಂಡರೇ ಭೇಟಿಯಾಗಿ ಮನವಿ ಮಾಡಿರುವುದರಿಂದ ಸಮಾಜದ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಸದ್ಯದಲ್ಲೇ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಈಗಾಗಲೇ ಮಾಜಿ ಸಿಎಂ ಬಿಎಸ್‍ವೈ ಬಳಿ ಚರ್ಚೆ ನಡೆಸಿರುವ ಬೊಮ್ಮಾಯಿ, ಮುರುಘಾ ಶ್ರೀಗಳು ಆರೋಪದಿಂದ ಮುಕ್ತವಾಗುವವರೆಗೂ ಪೀಠಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸದೆ ಹೊಸಬರನ್ನು ನೇಮಿಸಲು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಹೆಚ್ಚಿದ ಒತ್ತಡ: ಅಪ್ರಾಪ್ತೆಯರ ಲೈಂಗಿಕ ದೌರ್ಜನ್ಯವೆಸಗಿ ಜೈಲು ಪಾಲಾಗಿ ಪುನಃ ಅದೇ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮುರುಘಾ ಶ್ರೀಗಳನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂಬ ಒತ್ತಡ ಹೆಚ್ಚಾಗುತ್ತಲೇ ಇದೆ.

ಅವರು ಸ್ಥಾನದಲ್ಲಿ ಮುಂದುವರೆದಷ್ಟು ಮಠಕ್ಕೆ ಕಳಂಕ ತಪ್ಪಿದ್ದಲ್ಲ. ಹೀಗಾಗಿ ನ್ಯಾಯಾಲಯದಿಂದ ಆರೋಪ ಮುಕ್ತರಾಗುವವರೆಗೂ ಮುಂದುವರೆಯುವುದು ಬೇಡ ಎಂದು ಭಕ್ತರು ಒತ್ತಡ ಹಾಕಿದ್ದಾರೆ. ಪೀಠತ್ಯಾಗಕ್ಕೆ ಶಿವಮೂರ್ತಿ ಶರಣರು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ.

ಸಭೆಯಲ್ಲಿ ಶಿವಮೂರ್ತಿ ಮುರುಘಾ ಶರಣರ ಹೆಸರನ್ನು ಕೆಲವರು ಪ್ರಸ್ತಾಪಿಸಿದ್ದಕ್ಕೆ ತೀವ್ರ ಆಕ್ಷೇಪ ಕೇಳಿಬಂದಿದೆ. ಮುರುಘಾಮಠದ ಉಳಿವಿಗಾಗಿ ವೀರಶೈವ ಲಿಂಗಾಯತ ಸಮಾಜದ ಪ್ರಮುಖರು ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ.

ಮುರುಘಾ ಮಠದ ಪರಂಪರೆ, ಸಂಸ್ಕೃತಿ ಉಳಿಯಬೇಕು. ಮಠಕ್ಕೆ ಹೊಸ ಸ್ವಾಮೀಜಿ ನೇಮಕ ಆಗಬೇಕು. ಮುರುಘಾ ಮಠದಲ್ಲಿ ಈಗಿರುವ ಸಮಿತಿಗಳು ರದ್ದಾಗಬೇಕು. ನಾವೆಲ್ಲಾ ಹೋಗಿ ಮಠದಲ್ಲಿದ್ದವರನ್ನು ಹೊರ ಹಾಕೋಣ ಎಂಬ ಒತ್ತಡ ಕೇಳಿಬಂದಿದೆ.

ಪ್ರಸ್ತುತ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೀಠಾಧ್ಯಕ್ಷರ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಿದೆ. ಮಠದ ಧಾರ್ಮಿಕ, ಆಡಳಿತಾತ್ಮಕ ಚಟುವಟಿಕೆಗೆ ಅಡೆತಡೆ ಆಗಿದೆ. ಇಂಥ ಸಂದರ್ಭದಲ್ಲಿ ಹೊಸ ಪೀಠಾಧ್ಯಕ್ಷರ ನೇಮಕ ಅಗತ್ಯವಿದೆ. ಸರ್ಕಾರವು ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ.

Articles You Might Like

Share This Article