ಮುಸ್ಲಿಂ- ಕ್ರಿಶ್ಚಿಯನ್ ಮೀಸಲಾತಿ ರದ್ದು..?!

Social Share

ಬೆಂಗಳೂರು,ಅ.21- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮೀಸಲಾತಿ ರದ್ದುಪಡಿಸುವ ಲೆಕ್ಕಾಚಾರದಲ್ಲಿದೆ.

ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನ ಪ್ರಕಾರ ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರುವಂತಿಲ್ಲ. ವಾಸ್ತವ ಹೀಗಿದ್ದೂ ರಾಜ್ಯ ಸರ್ಕಾರ ಎಸ್ಸಿಗೆ 15ರಿಂದ 17, ಎಸ್ಟಿಗೆ ಶೇ.3ರಿಂದ 7ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಹೆಚ್ಚಿಸಲು ಮುಂದಾಗಿದೆ.

ಇದು ಒಂದು ರೀತಿ ಜೇನುಗೂಡಿಗೆ ಕೈ ಹಾಕಿದಂತೆ ಎಂಬುದು ಸರ್ಕಾರಕ್ಕೆ ಗೊತ್ತಿದ್ದು, ಮೀಸಲಾತಿಯನ್ನು ಹೆಚ್ಚಳ ಮಾಡಲು ನಾಳೆ ಅಥವಾ ನಾಡಿದ್ದು, ರಾಜ್ಯಪಾಲರ ಅಂಕಿತಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆ.
ಇಲ್ಲಿ ಮೂಲಪ್ರಶ್ನೆ ಇರುವುದು ಈ ಎರಡು ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಳ ಮಾಡಬೇಕಾದರೆ ಹಾಲಿ ಇರುವ ಯಾವುದಾದರೂ ಸಮುದಾಯದ ಮೀಸಲಾತಿಯನ್ನು ಕಿತ್ತು ಕೊಡುವುದೇ ರಾಜ್ಯ ಸರ್ಕಾರಕ್ಕಿರುವ ಏಕೈಕ ಮಾರ್ಗ.

ಅದನ್ನು ಹೊರತುಪಡಿಸಿ ಸರ್ವೋಚ್ಛ ನ್ಯಾಯಾಲಯ ತೀರ್ಪನ್ನು ಉಲ್ಲಂಘಿಸಿ ಮೀಸಲಾತಿಯನ್ನು ಹೆಚ್ಚಳ ಮಾಡಿದರೆ ಸರ್ಕಾರ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಕಳೆದ ಕೆಲವು ದಿನಗಳಿಂದ ಮುಸ್ಲಿಂ ಮತ್ತು ಕ್ರಿಶ್ಚಿಯನ್‍ರಿಗೆ ನೀಡಿರುವ ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ್ ಬೆಲ್ಲದ್ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಈ ಎರಡೂ ಸಮುದಾಯದ ಮೀಸಲಾತಿಯನ್ನು ರದ್ದುಪಡಿಸಿದರೆ ಹಿಂದೂ ಮತಗಳ ಕ್ರೋಢೀಕರಣವಾಗಲಿದೆ. ಪ್ರತಿಪಕ್ಷಗಳು ಏನೇ ಅಬ್ಬರಿಸಿಕೊಂಡರೂ ಹಿಂದೂಗಳ ಮತ ಕೈತಪ್ಪಬಹುದು ಎಂಬ ಭೀತಿಯಿಂದ ಸುಮ್ಮನಾಗಬಹುದೆಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಇದರ ಜೊತೆಗೆ ಮುಸ್ಲಿಂ ಮೀಸಲಾತಿ ಕಡಿತ ಮಾಡುವಂತೆ ಕೆಲ ಬಿಜೆಪಿಗರು ಒತ್ತಾಯಿಸಿದ್ದಾರೆ. ಇತ್ತ ಮುಸ್ಲಿಂ ಸಮುದಾಯ ತಮ್ಮ ಮೀಸಲಾತಿಯನ್ನು ಶೇ.7ಕ್ಕೆ ಏರಿಸುವಂತೆ ಒತ್ತಾಯಿಸುತ್ತಿದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ.15 ರಷ್ಟು ಮುಸ್ಲಿಂರಿದ್ದು, ಹೀಗಾಗಿ ಮೀಸಲಾತಿ ಹೆಚ್ಚಿಸುವಂತೆ ಸಮುದಾಯದವರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ರಾಜ್ಯ ಅಲ್ಪಸಂಖ್ಯಾತರ ಆಯೋಗ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದೆ.

ಮುಸ್ಲಿಂ ಸಮುದಾಯಕ್ಕೆ ಮಾತ್ರ 2ಎ ಅಡಿ ಮೀಸಲಾತಿ ಕಲ್ಪಿಸಲಾಗುತ್ತಿದೆ. ಈ ಸಮುದಾಯ 17 ಉಪಜಾತಿಗಳನ್ನು ಹೊಂದಿದೆ. ಹೀಗಾಗಿ ಮುಸ್ಲಿಂಮರಿಗೆ ಶಿಕ್ಷಣದಲ್ಲಿ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಜೊತೆಗೆ ಶೇ.20 ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೀಸಲಾತಿ ನೀಡಲಾಗುತ್ತಿದೆ.

ಮುಸ್ಲಿಂ ಉಪಜಾತಿಗಳು ಕೆಟಗರಿ 1, 2 ಮತ್ತು 2ಎಯಲ್ಲೂ ಮೀಸಲಾತಿ ಪಡೆಯುತ್ತಿವೆ. ಎಲ್ಲ ಕೆಟಗರಿಯಲ್ಲಿ ಮುಸ್ಲಿಂ ಮೀಸಲಾತಿ ಅನುಕೂಲ ಪಡೆಯುತ್ತಿದ್ದು, ಅವುಗಳನ್ನು ರದ್ದುಮಾಡಿ, ಅದರ ಬದಲಿಗೆ ಇತರ ಸಮುದಾಯಕ್ಕೆ ಮೀಸಲಾತಿ ನೀಡಿ ಎಂಬುದು ಬಿಜೆಪಿ ವಾದವಾಗಿದೆ.

ರಾಜ್ಯದಲ್ಲಿ ಮೊದಲಿಗೆ ನಾಗನಗೌಡ ಆಯೋಗ 1961ರಲ್ಲಿ ಮುಸ್ಲಿಮರನ್ನು ಒಬಿಸಿಯಡಿ ತರುವಂತೆ ವರದಿ ಸಲ್ಲಿಸಿತ್ತು. ಆಗ 10ಕ್ಕೂ ಹೆಚ್ಚು ಮುಸ್ಲಿಂ ಉಪಜಾತಿಗಳನ್ನು ಪತ್ತೆ ಹಚ್ಚಲಾಗಿತ್ತು. 1962ರಲ್ಲಿ ಈ ಸಂಬಂಧ ಆದೇಶ ಹೊರಡಿಸಲಾಯಿತು. ಆದರೆ, ಇದನ್ನು ಕೋರ್ಟ್‍ನಲ್ಲಿ ಪ್ರಶ್ನಿಸಲಾಯಿತು. ಹೀಗಾಗಿ ಅದನ್ನು 1962-1973ವರೆಗೆ ಅಮಾನತಿನಲ್ಲಿ ಇರಿಸಲಾಯಿತು.

1975ರಲ್ಲಿ ದೇವರಾಜ ಅರಸು ಸಿಎಂ ಆಗಿದ್ದಾಗ ಮುಸ್ಲಿಂ ಮೀಸಲಾತಿಗೆ ಜೀವ ಬಂತು. ಅದಕ್ಕಾಗಿ ಹಾವನೂರು ಆಯೋಗ ರಚಿಸಿದರು. ಅದರಂತೆ ಒಬಿಸಿಯಡಿ ಮುಸ್ಲಿಂರಿಗೆ 1977ರಲ್ಲಿ ಮೀಸಲಾತಿ ನೀಡುವಂತೆ ಆದೇಶ ಹೊರಡಿಸಿದರು.1983ರಲ್ಲಿ ಮತ್ತೊಂದು ಆಯೋಗ ರಚಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.

1984ರಲ್ಲಿ ವೆಂಕಟಸ್ವಾಮಿ ಆಯೋಗ ಒಕ್ಕಲಿಗ, ಕೆಲ ಲಿಂಗಾಯತರನ್ನು ಒಬಿಸಿ ಪಟ್ಟಿಯಿಂದ ಕೈ ಬಿಡುವಂತೆ ಶಿಫಾರಸು ಮಾಡಿತು. ಜೊತೆಗೆ ಮುಸ್ಲಿಮರಿಗೆ ಮೀಸಲಾತಿ ನೀಡುವಂತೆ ವರದಿ ನೀಡಿತು. ಆಯೋಗದ ವರದಿ ವಿರೋಸಿ ಒಕ್ಕಲಿಗರ ಪ್ರತಿಭಟನೆ ಹೆಚ್ಚಾದ ಕಾರಣ ವರದಿಗೆ ಒಪ್ಪಿಗೆ ನೀಡಿರಲಿಲ್ಲ.

1990ರಲ್ಲಿ ಚಿನ್ನಪ್ಪ ರೆಡ್ಡಿ ನೇತೃತ್ವದಲ್ಲಿ ಮತ್ತೊಂದು ಆಯೋಗ ರಚಿಸಲಾಯಿತು. ಆ ಆಯೋಗ ಮತ್ತೆ ಮುಸಲ್ಮಾನರು ಹಿಂದುಳಿದ ವರ್ಗ ಎಂದಿತು. ಅದರಂತೆ 1994ರಲ್ಲಿ ಸರ್ಕಾರ ಮುಸ್ಲಿಂರಿಗೆ ಕೆಟಗರಿ 2ರಲ್ಲಿ ಮೀಸಲಾತಿ ನೀಡುವಂತೆ ಆದೇಶಿಸಿತು. ಮತ್ತೊಂದು ಆದೇಶ ಹೊರಡಿಸಿ, ಮುಸ್ಲಿಂ ಮೀಸಲಾತಿಯನ್ನು ಕೆಟಗರಿ 2ರಲ್ಲಿ ಶೇ.6ಕ್ಕೆ ನಿಗದಿಗೊಳಿಸಲಾಯಿತು.

ಅದೇ ವರ್ಷ ಮಂಡಲ್ ಪ್ರಕರಣದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.50 ಇರಿಸುವುದು ಅನಿವಾರ್ಯವಾಯಿತು. ಅದಕ್ಕಾಗಿ ಎಲ್ಲಾ ಮೀಸಲಾತಿಗಳನ್ನು ಕಡಿತಗೊಳಿಸಲಾಯಿತು. ಹಾಗಾಗಿ ಮುಸ್ಲಿಂ ಮೀಸಲಾತಿಯನ್ನು 2ಎ ಅಡಿ ಶೇ.4ಕ್ಕೆ ಸೀಮಿತ ಮಾಡಲಾಯಿತು. ಆ ಬಗ್ಗೆ 1995 ಸರ್ಕಾರಿ ಆದೇಶ ಹೊರಡಿಸಲಾಯಿತು. ಅಲ್ಲಿಂದೀಚೆಗೆ ಅದು ಹಾಗೇ ಮುಂದುವರಿದಿದೆ.

ಈಗ ಸರ್ಕಾ ಎಸ್ಸಿ-ಎಸ್ಟಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕಾದರೆ ಯಾವುದಾದರೂ ಸಮುದಾಯದ ಮೀಸಲಾತಿಯ ಬುಟ್ಟಿಗೆ ಕೈ ಹಾಕಲೇಬೇಕು.

Articles You Might Like

Share This Article