“ಇಸ್ಲಾಂ ಬಗ್ಗೆ ತಪ್ಪಾಗಿ ಮಾತನಾಡಿದರೆ ಕಡಿದು ಚೀಲಕ್ಕೆ ತುಂಬುತ್ತೇವೆ” : ವಿಡಿಯೋ ವೈರಲ್

Social Share

ಬೆಂಗಳೂರು,ಫೆ.8- ಮತಾಂತರದ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಜೀವಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಯಚೂರು ಜಿಲ್ಲೆಯ ಮುದ್ಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿರುವ ವಿಡಿಯೋ ಕುರಿತಂತೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿರುವ ಮುದ್ಗಲ್ ಪೊಲೀಸ್ ಠಾಣೆಯ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಮುದ್ಗಲ್ ನಗರದಲ್ಲಿ ಧರ್ಮದ ಮುಖ್ಯಸ್ಥರೊಬ್ಬರಿಗೆ ಕೆಲ ಸಂಘಟನೆಗಳಿಗೆ ಸೇರಿದವರು ಎಂದು ಹೇಳಲಾದ ಕೆಲವರು ಜೀವಬೆದರಿಕೆ ಹಾಕಿದ್ದಾರೆ.ವಿಡಿಯೋದಲ್ಲಿ ಗುಂಪೊಂದು ವ್ಯಕ್ತಿಯೊಬ್ಬರನ್ನು ಮಧ್ಯದಲ್ಲಿ ನಿಲ್ಲಿಸಿಕೊಂಡು ಏರಿದ ದನಿಯಲ್ಲಿ ಧಮ್ಕಿ ಹಾಕುತ್ತಿದೆ. ಗುಂಪಿನಲ್ಲಿದ್ದ ಟೋಪಿಧಾರಿ ವ್ಯಕ್ತಿಯೊಬ್ಬ ತನ್ನ ಎದುರಿಗಿರುವ ವ್ಯಕ್ತಿಯ ಮೇಲೆ ಹರಿಹಾಯ್ದಿದ್ದು, ನಾವು ನಿಮ್ಮ ಧರ್ಮದ ವಿಷಯದಲ್ಲಿ ಏನನ್ನೂ ಹೇಳುವುದಿಲ್ಲ.
ನೀವು ನಮ್ಮ ಧರ್ಮದ ಬಗ್ಗೆ ಮಾತನಾಡಿದರೆ ಕಡಿದು ಬಿಡುತ್ತೇವೆ. ಕಡಿದು ಚೀಲಕ್ಕೆ ತುಂಬುತ್ತೇವೆ ಅರ್ಥವಾಯಿತೇ?. ಕುರಾನ್ ಮತ್ತು ಇಸ್ಲಾಂ ಬಗ್ಗೆ ತಪ್ಪಾಗಿ ಮಾತನಾಡಿದ್ದೀಯಾ, ತಪ್ಪೆಂದು ನಿನ್ನಷ್ಟಕ್ಕೆ ನೀನೇ ಅಂದುಕೊಂಡಿದ್ದೀಯಾ ಇನ್ನು ಮುಂದೆ ಇದು ಪುನಾವರ್ತನೆಯಾಗಬಾರದು ಎಂದು ಎಚ್ಚರಿಕೆ ನೀಡುತ್ತಿರುವುದು ಕಂಡುಬರುತ್ತಿದೆ.
ಈ ಬಗ್ಗೆ ಈ ಸಂಜೆಗೆ ಮಾಹಿತಿ ನೀಡಿರುವ ಮುದ್ಗಲ್ ಠಾಣೆಯ ಅಧಿಕಾರಿ, ಕಳೆದ ಒಂದು ವಾರದ ಹಿಂದೆ ಪ್ರಕರಣ ನಡೆದಿರುವ ಮಾಹಿತಿ ಇದೆ. ಧರ್ಮದ ಮುಖ್ಯಸ್ಥರೊಬ್ಬರು ಮತಾಂತರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪಕ್ಕಾಗಿ ಎಸ್‍ಡಿಪಿಐ ಮತ್ತು ಪಿಎಫ್‍ನ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ವೈರಲ್ಲಾದ ವಿಡಿಯೋ ಆಧರಿಸಿ ನಾವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈವರೆಗೂ ಯಾರೂ ಈ ವಿಷಯವಾಗಿ ಠಾಣೆಗೆ ಬಂದು ಮಾಹಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ಕಲೆ ಹಾಕಿದಾಗ ಧರ್ಮದ ಮುಖ್ಯಸ್ಥರೊಬ್ಬರಿಗೆ ಬೆದರಿಕೆ ಹಾಕಿರುವುದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಇಂದು ಸಂಜೆ ಧರ್ಮದ ಮುಖ್ಯಸ್ಥರು ಖುದ್ದಾಗಿ ಠಾಣೆಗೆ ಬಂದು ಮಾಹಿತಿ ನೀಡಲಿದ್ದಾರೆ. ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Articles You Might Like

Share This Article