ಚೆನ್ನೈ,ಫೆ.10- ರಾಜ್ಯ ಗುಪ್ತಚರ ವಿಭಾಗ ಕೆಲ ದಿನಗಳಿಂದ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ. ಈ ಹಿಂದೆ ತಮ್ಮ ಕಚೇರಿಗೆ ನೀಡಲಾಗಿದ್ದ ರಕ್ಷಣೆಯನ್ನೂ ಕಡಿತಗೊಳಿಸಲಾಗಿದ್ದು, ವೈ-ಕೆಟಗರಿ ರಕ್ಷಣೆಯನ್ನು ಎಕ್ಸ್ ಕೆಟಗರಿಗೆ ಬದಲಾಯಿಸಲಾಗಿದೆ ಎಂದು ಹೇಳಿದರು.
ತಮಿಳುನಾಡು ಪೊಲೀಸರ ಮೇಲೆ ಗುಪ್ತಚರ ಇಲಾಖೆ ಪ್ರಾಬಲ್ಯ ಸಾಸುತ್ತಿದೆ. ಗುಪ್ತಚರ ವಿಭಾಗದ ಎಡಿಜಿಪಿ ಪೊಲೀಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ಫೋನ್ ಕದ್ದಾಲಿಕೆಯನ್ನು ಖಂಡಿಸುತ್ತೇನೆ. ಎಫ್‍ಐಆರ್ ದಾಖಲಿಸುವ ಮುನ್ನವೇ ಪೊಲೀಸರು ಒಂದು ತೀರ್ಮಾನಕ್ಕೆ ಬಂದಿರುವುದು ಇದೇ ಮೊದಲು ಎಂದು ದೂರಿದ್ದಾರೆ.
ನಾವು ಏನೇ ಹೇಳಿದರೂ ಅದು ಸಾರ್ವಜನಿಕ ವಲಯದಲ್ಲಿ ಬರುತ್ತದೆ. ತಮಿಳುನಾಡು ಗುಪ್ತಚರ ತಂಡ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದೆ. ಇದನ್ನು ಸಾಬೀತುಪಡಿಸಲು ನಾನು ವಾಟ್ಸಪ್ ಚಾಟ್‍ಗಳ ಸ್ಕ್ರೀನ್‍ಶಾಟ್‍ಗಳನ್ನು ಸಹ ಹಂಚಿಕೊಂಡಿದ್ದೇನೆ. ಶೀಘ್ರವೇ ಔಪಚಾರಿಕವಾಗಿ ದೂರು ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ.
