ಮೈಸೂರುನಲ್ಲಿ ಎಲ್ಲರ ಗಮನ ಸೆಳೆದ ರೈತ ದಸರಾ

ಮೈಸೂರು, ಅ.01-ಮೈಸೂರು ದಸರಾ ಪ್ರಯುಕ್ತ ನಗರದಲ್ಲಿಂದು ಆಯೋಜಿಸಿದ್ದ ರೈತ ದಸರಾ ಎಲ್ಲರ ಗಮನ ಸೆಳೆಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಪ್ರಾರಂಭವಾದ ರೈತ ದಸರಾ ಮೆರವಣಿಗೆ ಜೆ.ಕೆ.ಮೈದಾನದಲ್ಲಿ ಕೊನೆಗೊಂಡಿತು. ಎತ್ತಿನಗಾಡಿಯನ್ನು ಓಡಿಸುವ ಮೂಲಕ ರೈತ ದಸರಾ ಮೆರವಣಿಗೆಗೆ ಸಚಿವ ಕೋಟಾಶ್ರೀನಿವಾಸಪೂಜಾರಿ ಚಾಲನೆ ನೀಡಿದರು.

ಎತ್ತಿನ ಗಾಡಿಗಳನ್ನು ಹಾಗೂ ಎತ್ತುಗಳನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಮೆರವಣಿಗೆಗೆ ಹುಲಿವೇಷ, ಡೊಳ್ಳುಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಸಾಥ್ ನೀಡಿದವು. ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪಲತಾ ಅವರು ಇದ್ದ ಎತ್ತಿನಗಾಡಿಯನ್ನು ಸಚಿವರು ಸ್ವಲ್ಪ ದೂರದ ತನಕ ಓಡಿಸಿ ಗಮನ ಸೆಳೆದರು.

ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಶ್ರೀನಿವಾಸ ಪೂಜಾರಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದಸರಾ ಹಬ್ಬ ಪಾರಂಪರಿಕವಾಗಿ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಚಾಮುಂಡೇಶ್ವರಿ ದೇವಿಯನ್ನು ಪೂಜಿಸುವ ಸಂಪ್ರದಾಯ ನಡೆದು ಬಂದಿದೆ.

10 ದಿನಗಳು ನಡೆಯುವ ದಸರಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದರಲ್ಲಿ ರೈತರ ದಸರಾ ಕೂಡ ಒಂದು. ರೈತ ದೇಶದ ಬೆನ್ನೆಲುಬು. ಈ ಸಂದರ್ಭದಲ್ಲಿ ಆತನನ್ನು ಉದ್ದೇಶಿಸಿ ಕಾರ್ಯಕ್ರಮ ಆಯೋಜಿಸುವುದು ಒಳ್ಳೆಯದೆಂದರು.