ಮೈಸೂರು, ಅ.2- ಭಾರತ್ ಜೋಡೋ ಯಾತ್ರೆಯಲ್ಲಿ ತೊಡಗಿಸಿಕೊಂಡಿರುವ ರಾಹುಲ್‍ಗಾಂಧಿ ಮೈಸೂರಿನ ಬದನವಾಳು ಗ್ರಾಮದಲ್ಲಿನ ಖಾದಿ ಗ್ರಾಮೋದ್ಯೋಗ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಾಪು ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಜನ ಸಾಮಾನ್ಯರ ಜೊತೆ ಕುಳಿತು ಪ್ರಾರ್ಥನೆಯಲ್ಲಿ ಭಾಗಿಯಾದರು. ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತಿತರರು ಉಪಸ್ಥಿತರಿದ್ದರು. ನಂತರ ರಾಹುಲ್ ಹಾಗೂ ಇತರ ನಾಯಕರು ಕೈ ಮಗ್ಗಕ್ಕೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಿದರು. ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದರು.
ಕೈಮಗ್ಗದಲ್ಲಿಬಟ್ಟೆ ನೇಯ್ಗೆ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದ ರಾಹುಲ್‍ಗಾಂಧಿ, ಕೈಮಗ್ಗದಲ್ಲಿ ಎಷ್ಟು ಎಳೆಗಳನ್ನು ಅಳವಡಿಸಲಾಗಿದೆ. ಎಲ್ಲವನ್ನೂ ಕೈನಲ್ಲೇ ಜೋಡಿಸಲಾಗಿದೆಯೇ ? ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಹೊಸ ಯಂತ್ರಗಳಿದ್ದರೂ ಹಳೆಯ ಮಾದರಿಯಲ್ಲೇ ನೇಯ್ಗೆ ಮಾಡುತ್ತಿರುವುದೇಕೆ, ಆಧುನಿಕ ಯಂತ್ರವನ್ನು ಯಾಕೆ ಬಳಸುತ್ತಿಲ್ಲ ಎಂದು ಕೇಳಿ ಮಾಹಿತಿ ಪಡೆದುಕೊಂಡರು. ಹೊಸ ಯಂತ್ರಗಳಲ್ಲಿ ಕಾಲು ನೋವು ಹೆಚ್ಚಾದ್ದರಿಂದ ಹಳೆಯ ಯಂತ್ರಗಳಲ್ಲೇ ಕೆಲಸ ಮಾಡುತ್ತಿರುವುದಾಗಿ ಸಿಬ್ಬಂದಿ ತಿಳಿಸಿದರು.
ಮಹಿಳಾ ಸಿಬ್ಬಂದಿಗಳು ಬಟ್ಟೆ ನೇಯ್ಗೆ ಮಾಡಲು ಎಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತಾರೆ. ಸಿಬ್ಬಂದಿಗಳು ದಿನಕ್ಕೆ ಎಷ್ಟು ಗಳಿಕೆ ಮಾಡುತ್ತಿದ್ದಾರೆ ಎಂಬೆಲ್ಲಾ ಮಾಹಿತಿಯನ್ನು ಪಡೆದು ರಾಜ್ಯ ನಾಯಕರು ರಾಹುಲ್‍ಗಾಂಧಿ ಅವರಿಗೆ ಭಾಷಾಂತರಿಸಿ ವಿವರಿಸಿದರು. ನಂತರ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳೊಂದಿಗೂ ರಾಹುಲ್ ಸಮಾಲೋಚನೆ ನಡೆಸಿದರು.
ಬಂದನವಾಳುನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 1932ರಲ್ಲಿ ಈ ಖಾದಿ ಗ್ರಾಮೋದ್ಯೋಗ ಸಂಸ್ಥೆ ಉತ್ಪಾದನೆ ಆರಂಭಿಸಿತ್ತು. ಬಾಪು 1927ರಲ್ಲಿ ಮತ್ತು 1932ರಲ್ಲಿಯೂ ಈ ಗ್ರಾಮಕ್ಕೆ ಆಗಮಿಸಿ ಸಹಕಾರಿ ಸಂಘವನ್ನು ಸ್ಥಾಪಿಸಲು ನೆರವಾದರು ಎಂದು ಹೇಳಿದ್ದಾರೆ.