ಮೈಸೂರು,ಜ.19- ಕೊರೊನಾ ಸೋಂಕಿತರು ಹಾಗೂ ಮೃತರ ಸಂಖ್ಯೆ ಎರಡರಲ್ಲೂ ಮೈಸೂರು ಜಿಲ್ಲೆ ರಾಜ್ಯದಲ್ಲೇ ಎರಡನೆ ಸ್ಥಾನದಲ್ಲಿತ್ತು.ಪಾಸಿಟಿವಿಟಿ ದರ ಶೇ 29.98ನ್ನು ಮುಟ್ಟಿದೆ. 17 ವರ್ಷದ ಬಾಲಕಿ ಸೇರಿದಂತೆ ಒಟ್ಟು ಮೂವರು ಮೃತಪಟ್ಟಿದ್ದಾರೆ. 585 ಮಂದಿ ಗುಣಮುಖರಾಗಿದ್ದು, ಸೋಂಕು ತಾಲೂಕು ಕೇಂದ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದೆ.
ಜಿಲ್ಲೆಯಲ್ಲಿ ಒಟ್ಟು 6,164 ಮಂದಿಯ ಗಂಟಲು ದ್ರವವನ್ನು ಪರೀಕ್ಷಿಸಲಾಗಿದ್ದು, 96 ಮಕ್ಕಳೂ ಸೇರಿದಂತೆ 1,848 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ 1,347 ಮಂದಿ ನಗರ ವಾಸಿಗಳು. ತಿ.ನರಸೀಪುರದಲ್ಲಿ 107, ನಂಜನಗೂಡು 83, ಕೆ.ಆರ್.ನಗರ 74, ಮೈಸೂರು ತಾಲ್ಲೂಕು 69, ಪಿರಿಯಾಪಟ್ಟಣ 62, ಹುಣಸೂರು 61, ಎಚ್.ಡಿ.ಕೋಟೆ 22, ಸಾಲಿಗ್ರಾಮ 21, ಸರಗೂರು ತಾಲ್ಲೂಕಿನಲ್ಲಿ ಇಬ್ಬರು ಸೋಂಕಿತರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 8,401 ಸಕ್ರಿಯ ಪ್ರಕರಣಗಳ ಪೈಕಿ 184 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ, 16 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, 12 ಮಂದಿ ಸರ್ಕಾರಿ ಕೋವಿಡ್ ಹೆಲ್ತ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, 8,093 ಮಂದಿ ಮನಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜ.13ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಗರದ ಎನ್.ಆರ್.ಮೊಹಲ್ಲಾದ 17 ವರ್ಷದ ಬಾಲಕಿ, 12 ರಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹುಣಸೂರು ನಗರದ 67 ವರ್ಷದ ಪುರುಷ ಹಾಗೂ 14 ರಂದು ಕೆ.ಆರ್.ಆಸ್ಪತ್ರಗೆ ದಾಖಲಾಗಿದ್ದ ತಿ.ನರಸೀಪುರದ 65 ವರ್ಷದ ಮಹಿಳೆ ಕೋವಿಡ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮಂಗಳವಾರ ಒಂದೇ ದಿನ ಜಿಲ್ಲೆಯಲ್ಲಿ 96 ಮಕ್ಕಳಲ್ಲಿ ಸೋಂಕು ದೃಢವಾಗಿದ್ದು, ಮೈಸೂರು ನಗರದಲ್ಲೇ ಸುಮಾರು 75 ಮಂದಿ ಮಕ್ಕಳಿದ್ದಾರೆ. ಎಚ್.ಡಿ.ಕೋಟೆಯಲ್ಲಿ 6, ಕೆ.ಆರ್.ನಗರ, ಮೈಸೂರು ತಾಲೂಕು, ನಂಜನಗೂಡಿನಲ್ಲಿ ತಲಾ ಮೂವರು, ಹುಣಸೂರು, ಪಿರಿಯಾಪಟ್ಟಣ, ತಿ,ನರಸೀಪುರದಲ್ಲಿ ತಲಾ ಇಬ್ಬರು ಮಕ್ಕಳು ಸೋಂಕಿತರಾಗಿದ್ದಾರೆ.
