ರತ್ನಖಚಿತ ಸಿಂಹಾಸನ ಜೋಡಣೆ, ದಸರಾ ದರ್ಬಾರ್‌ಗೆ ಅರಮನೆ ಸಜ್ಜು

ಮೈಸೂರು,ಸೆ.24-ಮೈಸೂರು ಅರಮನೆಯಲ್ಲಿ ಇಂದು ರತ್ನಖಚಿತ ಸಿಂಹಾಸನ ಜೋಡಣಾ ಕಾರ್ಯ ಮಾಡಲಾಯಿತು.  ಅರಮನೆಯ ದರ್ಬಾರ್‍ಹಾಲ್‍ನಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಗಣಹೋಮ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ಮಾಡಿದ ನಂತರ ಸಿಂಹಾಸನ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸ್ಟ್ರಾಂಗ್‍ರೂಮ್‍ನಲ್ಲಿದ್ದ ಸಿಂಹಾಸನ ಭಾಗಗಳನ್ನು ದರ್ಬಾರ್ ಹಾಲ್‍ಗೆ ತಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ಜೋಡಣೆ ಕಾರ್ಯ ಕೈಗೊಳ್ಳಲಾಯಿತು.
ಸಿಂಹಾಸನ ಜೋಡಣೆ ಕಾರ್ಯ ಇದ್ದುದ್ದರಿಂದ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧಿಸಲಾಗಿತ್ತು.

ಸೆ.29ರಿಂದ ಅಕ್ಟೋಬರ್ 7ರವರೆಗೆ ದಸರಾ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್‍ನಡೆಸಲಿದ್ದಾರೆ.