ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಶುರು

Spread the love

ಮೈಸೂರು, ಸೆ.29- ಚಾಮುಂಡಿಬೆಟ್ಟದಲ್ಲಿ ಜನರ ದಸರಾ ಆರಂಭವಾದರೆ ಇತ್ತ ಮೈಸೂರು ಅರಮನೆಯಲ್ಲಿ ಖಾಸಗಿ ದಸರಾಗೆ ಚಾಲನೆ ನೀಡಲಾಯಿತು. ಅರಮನೆಯಲ್ಲಿ ಬೆಳಗಿನ ಜಾವದಿಂದಲೇ ಶರನ್ನವರಾತ್ರಿ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಖಾಸಗಿ ದರ್ಬಾರ್ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಚಾಲನೆಗೊಂಡವು. ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ 5.10 ರಿಂದ 5.30ರೊಳಗೆ ಸಿಂಹಾಸನಕ್ಕೆ ಸಿಂಹ ಜೋಡಣೆ ಕಾರ್ಯ ನೆರವೇರಿತು.

ಇದಕ್ಕೂ ಮೊದಲು ಕಳಶ ಪೂಜೆ, ಗಣಪತಿ ಪೂಜೆ, ವಿವಿಧ ಹೋಮ-ಹವನಗಳನ್ನು ನೆರವೇರಿಸಲಾಯಿತು. ನಂತರ 8.05 ರಿಂದ 8.30ರೊಳಗೆ ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಖಾಸಗಿ ದರ್ಬಾರ್ ಪ್ರಾರಂಭಿಸಲು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಯಿತು. ವಾಣಿವಿಲಾಸ ದೇವರ ಮನೆಯಲ್ಲಿ ತ್ರಿಶಿಕಾದೇವಿ ಅವರಿಗೂ ಕಂಕಣ ಧಾರಣೆ ಮಾಡಲಾಯಿತು.

ನಂತರ 9.30ಕ್ಕೆ ಸವಾರ್ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸು, ಕುದುರೆಗಳಿಗೆ ಪೂಜೆ ಸಲ್ಲಿಸಿ ಆನಂತರ ಯದುವೀರ್ ಸಿಂಹಾಸನಕ್ಕೆ ನಮಸ್ಕರಿಸಿ ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್ ನಡೆಸಿದರು. ನಂಜನಗೂಡು, ಶೃಂಗೇರಿ, ತಮಿಳುನಾಡಿನ ಕೆಲ ದೇವಾಲಯಗಳಲಿ ವಿಶೇಷ ಪೂಜೆ ಸಲ್ಲಿಸಿ ಅರ್ಚಕರು ತಂದಿದ್ದ ಪ್ರಸಾದವನ್ನು ಒಡೆಯರ್ ಅವರು ಸ್ವೀಕರಿಸಿದರು. ಇದಾದ ನಂತರ ಒಡೆಯರ್ ಅವರಿಗೆ ನಜರ್ ಸಲ್ಲಿಸಲಾಯಿತು.

Facebook Comments