ಮೈಸೂರು ದಸರಾದಲ್ಲಿ ಗಮನ ಸೆಳೆದ ಹಸಿರು ಸಂತೆ

ಮೈಸೂರು, ಅ.5- ದಸರಾ ಅಂಗವಾಗಿ ನಗರದ ಬುಲೇವಾರ್ಡ್ ರಸ್ತೆಯಲ್ಲಿ ಇಂದು ಚಿತ್ರ-ಹಸಿರು ಸಂತೆ ಆಯೋಜಿಸಲಾಗಿತ್ತು. ರಸ್ತೆಯ ಒಂದು ಬದಿಯಲ್ಲಿ ಹಸಿರು ಸಂತೆ, ಮತ್ತೊಂದು ಬದಿಯಲ್ಲಿ ಚಿತ್ರಸಂತೆ ನಡೆದಿದ್ದು ಈ ಬಾರಿಯ ವಿಶೇಷ.ಕಳೆದ ಬಾರಿ ಒಪನ್ ಸ್ಟ್ರೀಟ್ ಫೆಸ್ಟಿವಲ್ ಆಯೋಜಿಸಿದ್ದಾಗ ಕೆಲ ಸಮಸ್ಯೆಗಳು ಉಂಟಾಗಿದ್ದರಿಂದ ಈ ಬಾರಿ ಚಿತ್ರ- ಹಸಿರು ಸಂತೆ ಆಯೋಜಿಸಲಾಗಿತ್ತು.

ಹಸಿರು ಸಂತೆಯಲ್ಲಿ ಸಾವಯವ ಕೃಷಿಕರು ತಮ್ಮ ಉತ್ಪನ್ನಗಳನ್ನು ಮಾರಾಟ, ಪ್ರದರ್ಶ ಮಾಡಿದರೆ, ಚಿತ್ರ ಸಂತೆಯಲ್ಲಿ ಹಲವಾರು ಕಲಾವಿದರು ಪ್ರತಿಭಾ ಪ್ರದರ್ಶನ ಮಾಡಿ ಕಲಾಕೃತಿಗಳ ಮಾರಾಟ ಮಾಡಿದರು. ಪಾರಂಪರಿಕ ಕಲೆಗಳಾದ ತಂಜಾವೂರು, ಮೈಸೂರು ಚಿತ್ರಕಲೆಗಳ ಕಲಾವಿದರು ತಮ್ಮ ಕಲಾ ನೈಪುಣ್ಯತೆ ಮೆರೆಯಲು ಈ ವೇದಿಕೆ ನೆರವಾಯಿತು.

ಚಿತ್ರಕಲಾವಿದರಿಗೆ ಅಗತ್ಯವಾದ ಬ್ರಶ್, ಬಣ್ಣಗಳನ್ನು ಮಾರಾಟ ಮಾಡಲಾಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ತಾವೇ ರಚಿಸಿದ ಚಿತ್ರಗಳನ್ನು ಪ್ರದರ್ಶಿಸಿದರು.
ಹಲವಾರು ಬಗೆಯ ಅದರಲ್ಲೂ ತೈಲವರ್ಣ ಚಿತ್ರ, ಕ್ಯಾನ್ವಾಸ್ ಚಿತ್ರ ಸೇರಿದಂತೆ ವಿಶಿಷ್ಟ ಆಯಾಮದ ಚಿತ್ರಗಳು ಪ್ರದರ್ಶನಗೊಂಡವು. ಮಣ್ಣಿನ ಕರಕುಶಲ ವಸ್ತುಗಳು ಸ್ಥಳದಲ್ಲೇ ತಯಾರಿಸುವ ಕುಂಬಾರಿಕೆ ಚಕ್ರದಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದು ಈ ಬಾರಿಯ ವಿಶೇಷಗಳಲ್ಲಿ ಒಂದು.

ತಾಂತ್ರಿಕ ಯುಗದಲ್ಲಿದ್ದರೂ ಸಹ ನಮ್ಮ ಹಿಂದಿನ ಕೃಷಿ ಪದ್ಧತಿ ಅನುಸರಿಸುವ ನಿಟ್ಟಿನಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದಲ್ಲಿ ಹಸಿರುಸಂತೆ ಹಾಗೂ ಚಿತ್ರಸಂತೆ ಉದ್ಘಾಟಿಸಿದ ಸಚಿವರು ನಂತರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದರು.

ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ಅದು ಈಗ ನಿಜವಾಗುತ್ತಿದೆ. ಈಗ ರಾಸಾಯನಿಕ ಮುಕ್ತವಾದ ಸಾವಯವ ಕೃಷಿ ಪದ್ಧತಿಯಿಂದ ಸಾಕಷ್ಟು ನೆರವಾಗುತ್ತಿದೆ. ಹಾಗಾಗಿ ಈಗ ಅದೇ ಪದ್ಧತಿಗೆ ಎಲ್ಲರೂ ಮರಳುತ್ತಿರುವುದು ಸಂತೋಷದ ವಿಷಯ ಎಂದರು. ಸಾವಯವ ಕೃಷಿ ಪದ್ಧತಿಯಿಂದ ಬೆಳೆದಂತಹ ಆಹಾರ ಪದಾರ್ಥ ವಿಷಮುಕ್ತವಾಗಿರುತ್ತದೆ. ಹಾಗಾಗಿ ಆರೋಗ್ಯವೂ ಸಹ ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುತ್ತಿದೆ ಎಂದರು.

ಇಲ್ಲಿ ನನಗೊಬ್ಬ ರೈತ ಹೇಳಿದರು ನಾವು ಒಂದು ವಾರ ಬೆಳೆದಂತಹ ಕೃಷಿ ಉತ್ಪನ್ನಗಳು ಎರಡು ದಿನಗಳಲ್ಲಿ ಮಾರಾಟ ವಾಗುತ್ತವೆ ಎಂದರು. ಈ ಕೃಷಿ ಪದ್ಧತಿಯಿಂದ ನಷ್ಟವಂತೂ ಇಲ್ಲ ಎಂದು ಸಚಿವರು ಹೇಳಿದರು.ನಾವೀಗ ಹಳೆ ಕಾಲದ ಪದ್ಧತಿ ಅನುಸರಿಸುವಲ್ಲಿಗೆ ಮತ್ತೆ ಸಾಗುತ್ತಿದ್ದೇವೆ. ಈ ಪದ್ಧತಿ ಅಭಿವೃದ್ಧಿಗೆ ಆದ್ಯತೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಕೇಂದ್ರದಿಂದ 120 ಕೋಟಿ ರೂ. ಬಿಡುಗಡೆಯಾಗಿರುವುದರಿಂದ ನೆರೆ ಪರಿಹಾರಕ್ಕೆ ತಾತ್ಕಾಲಿಕ ಪರಿಹಾರ ದೊರಕಿದೆ. ಇದರಿಂದ ಸಂತ್ರಸ್ತರಿಗೆ ನೆರವು ನೀಡಲು ಅನುಕೂಲವಾಗಿದೆ. ನಾವು 3500 ಕೋಟಿ ರೂ. ಕೇಳಿದ್ದೆವು. ಸದ್ಯಕ್ಕೆ 1200 ಕೋಟಿ ಬಂದಿದೆ. ಮುಂದಿನ ದಿನಗಳಲ್ಲಿ ಉಳಿದ ಅನುದಾನ ಬರುವ ನಿರೀಕ್ಷೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.