ನಾಳೆ ಅರಮನೆ ಪ್ರವೇಶಿಸಲಿದೆ ಕಾಡಿನಿಂದ ಆಗಮಿಸಿದ ಗಜ ಪಡೆ

ಮೈಸೂರು, ಆ.25- ಕಾಡಿನಿಂದ ನಾಡಿಗೆ ಆಗಮಿಸಿರುವ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜ ಪಡೆ ನಾಳೆ ಮೈಸೂರು ಅರಮನೆಯಲ್ಲಿ ಪ್ರವೇಶಿಸುತ್ತಿದೆ.
ನಾಳೆ ಮಧ್ಯಾಹ್ನ 12 ಗಂಟೆಗೆ ಮೈಸೂರು ಅರಮನೆಗೆ ಮೊದಲ ತಂಡದ 6 ಆನೆಗಳು ಆಗಮಿಸಲಿದೆ.

ಹುಣಸೂರಿನ ವೀರನಹೊಸಹಳ್ಳಿಯಿಂದ ನಗರಕ್ಕೆ ಆಗಮಿಸಿದ ಆನೆಗಳು ಅಶೋಕಪುರಂನ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದೆ. ನಾಳೆ ಬೆಳಗ್ಗೆ ಅರಣ್ಯ ಭವನದಿಂದ ಹೊರಡಲಿರುವ ಆನೆಗಳು ಅಶೋಕಪುರಂ ಮುಖ್ಯ ರಸ್ತೆ, ರಾಮಸ್ವಾಮಿ ವೃತ್ತ ಬಳಸಿಕೊಂಡು ಚಾಮರಾಜ ಜೋಡಿ ರಸ್ತೆ ಮೂಲಕ ಅರಮನೆ ಪ್ರವೇಶಿಸಲಿದೆ.

ನಾಳೆ ಆಗಮಿಸಲಿರುವ ಆನೆಗಳನ್ನು ಅರಮನೆಯ ಜೈ ಮಾರ್ತಾಂಡ ದ್ವಾರದ ಬಳಿ ಪೂಜೆ ಸಲ್ಲಿಸಿ ಮಂಗಳ ವಾದ್ಯಗಳೊಂದಿಗೆ ಬರಮಾಡಿಕೊಳ್ಳಲಾಗುತ್ತಿದೆ.
ಇದಕ್ಕೂ ಮುನ್ನ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಿದ್ದಾರೆ.

ಗಜಪಡೆ ಸ್ವಾಗತ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉಪಸ್ಥಿತರಿದ್ದು, ಅಧ್ಯಕ್ಷತೆಯನ್ನು ಶಾಸಕ ರಾಮದಾಸ್ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು , ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಕ್ಯಾಪ್ಟನ್ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮಿ , ಧನಂಜಯ, ಈಶ್ವರ ಆನೆಗಳು ಮೊದಲ ತಂಡದಲ್ಲಿ ಅರಮನೆಗೆ ಆಗಮಿಸಲಿದೆ.
ಎರಡನೆ ತಂಡದ ಆನೆಗಳು ಸೆಪ್ಟೆಂಬರ್ ಮೊದಲ ವಾರದಲ್ಲಿ ನಗರಕ್ಕೆ ಆಗಮಿಸಲಿದೆ.