ದಸರಾ ಗಜಪಡೆಯ ತೂಕ ಪರೀಕ್ಷೆ, ಅಂಬಾರಿ ಹೊರುವ ಅರ್ಜುನನೇ ಭಾರಿ ಭಾರ..!

ಮೈಸೂರು, ಆ.27- ಜಗದ್ವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಗಜ ಪಡೆಗಳ ಪೈಕಿ ಅರ್ಜನನೇ ಬಲ ಶಾಲಿಯಾಗಿದ್ದಾನೆ. ಪ್ರತಿ ವರ್ಷದಂತೆ ಈ ಬಾರಿಯೂ ಇಂದು ಬೆಳಗ್ಗೆ ಆನೆಗಳ ತೂಕ ಹಾಗೂ ಪರೀಕ್ಷೆ ನಡೆಸಲಾಯಿತು. ಆರು ಆನೆಗಳ ಪೈಕಿ ಅರ್ಜುನನೇ ಗರಿಷ್ಠ ಹೊಂದಿದ್ದಾನೆ. ಅರ್ಜುನ 5,800 ಕೆಜಿ ತೂಕವಿದ್ದಾನೆ.

ಕಳೆದ ವರ್ಷ ಇದೇ ಅರ್ಜುನ 5250 ಕೆಜಿ ಇದ್ದು, ಈ ಬಾರಿ 550 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಅಭಿಮನ್ಯು 2ನೇ ಸ್ಥಾನದಲ್ಲಿದ್ದು, 5,145 ಕೆಜಿ, ಧನಂಜಯ 4,460 ಕೆಜಿ ಇದ್ದು ಮೂರನೇ ಸ್ಥಾನದಲ್ಲಿದ್ದಾನೆ. ನಂತರದ ಸ್ಥಾನಗಳಲ್ಲಿ ಈಶ್ವರ 3,995ಕೆಜಿ, ವರಲಕ್ಷ್ಮಿ 3,510ಕೆಜಿ ಹಾಗೂ ವಿಜಯ 2,825 ಕೆಜಿ ತೂಕ ಇದೆ.

ಕಾಡಿನಿಂದ ನಾಡಿಗೆ ಆಗಮಿಸುವ ಗಜಪಡೆಯ ಆಹಾರ ಕ್ರಮ ಬದ್ಧತೆಗಗಿ ತೂಕ ಮಾಡಿಸಿ ಅದರ ತೂಕದ ಆಧಾರದ ಮೇಲೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಅಗತ್ಯ ತಾಲೀಮು ಮಾಡಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಆನೆಗಳ ತೂಕವನ್ನು ಮಾಡಿಸಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಗಜಪಡೆಯ ಆರೈಕೆ ಆರೋಗ್ಯದ ಮೇಲೆ ನಿಗಾ ಇಡಲು ಆನೆಗಳ ತೂಕ ಪರೀಕ್ಷೆ ಮಾಡಿಸಲಾಗುತ್ತಿದೆ. ತಾಲೀಮು ಆರಂಭಕ್ಕೂ ಮುನ್ನ ಹಾಗೂ ಆಯುಧ ಪೂಜೆ ದಿನ ಆನೆಗಳ ತೂಕ ಪರೀಕ್ಷೆ ಮಾಡಿ ದಸರಾದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗುತ್ತಿದೆ.

ಪ್ರತಿ ದಿನ ಈ ಆನೆಗಳು 5 ಕಿ.ಮೀ. ನಡೆದು ತಾಲೀಮು ನಡೆಸಬೇಕಾಗುತ್ತದೆ. ಹಾಗೆಯೇ ವಿಜಯದಶಮಿ ದಿನ ಜಂಬೂಸವಾರಿ ಸಂದರ್ಭದಲ್ಲಿ ಅರ್ಜುನ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಅರಮನೆಯಿಂದ ಬನ್ನಿಮಂಟಪದವರೆಗೆ ಸಾಬೇಕಾಗುತ್ತದೆ.

ಹಾಗಾಗಿ ಆನೆಗಳ ದೈಹಿಕ ಸಾಮಥ್ರ್ಯ ಅರಿಯಲು ತೂಕದ ಆಧಾರದ ಮೇಲೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಬೆಲ್ಲ, ತೆಂಗಿನ ಕಾಯಿ, ಭತ್ತ, ಮುದ್ದೆ, ಬೆಣ್ಣೆ ಸೇರಿದಂತೆ ಹಲವು ಪೌಷ್ಠಿಕಾಂಶಯುಕ್ತ ಆಹಾರವನ್ನು ಇಂದಿನಿಂದ ನೀಡಲಾಗುತ್ತಿದೆ.