ತಾಲೀಮು ವೇಳೆ ವಿಚಲಿತಗೊಂಡ ಈಶ್ವರ..!

ಮೈಸೂರು,ಆ.29- ಗಜಪಡೆ ತಾಲೀಮು ಸಂದರ್ಭದಲ್ಲಿ ಈಶ್ವರ ಇಂದೂ ಕೂಡ ವಿಚಲಿತಗೊಂಡಿರುವ ಪ್ರಸಂಗ ನಡೆದಿದೆ. ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವ ಮೊದಲು ತಂಡದ ಆನೆಗಳಿಗೆ ನಿನ್ನೆಯಿಂದ ತಾಲೀಮು ಆರಂಭವಾಗಿದ್ದು, ಅರಮನೆಯಿಂದ ಬನ್ನಿಮಂಟಪದವರೆಗೂ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ.

ಎಂದಿನಂತೆ ಇಂದೂ ಕೂಡ ತಾಲೀಮು ನಡೆಸುವ ವೇಳೆ ಈಶ್ವರ ಗಲಿಬಿಲಿಗೊಂಡಿದ್ದಾನೆ. ಅರಮನೆಯಿಂದ ಬನ್ನಿಮಂಟಪದ ಮಾರ್ಗವಾಗಿ ಆನೆಗಳು ತಾಲೀಮಿಗೆ ತೆರಳುವಾಗ ರಸ್ತೆಯಲ್ಲಿ ವಾಹನಗಳು ಕೂಡ ಸಂಚರಿಸುತ್ತಿದ್ದವು. ಈ ವೇಳೆ ವಾಹಗಳ ಶಬ್ಧಕ್ಕೆ ಈಶ್ವರ ಬೆಚ್ಚಿಬಿದ್ದಿದ್ದು, ಆತಂಕಗೊಂಡು ಅತ್ತ-ಇತ್ತ ಚಲಿಸಿದ್ದಾನೆ. ಈಶ್ವರನನ್ನು ನಿಯಂತ್ರಿಸಲು ಮಾವುತರು ಹಾಗೂ ಕಾವಾಡಿಗಳು ಹರಸಾಹಸ ಪಡಬೇಕಾಯಿತು.

ಪ್ರತಿ ದಿನ ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಯುತ್ತಿದ್ದು, ಅರಮನೆಯಿಂದ ಬನ್ನಿಮಂಟಪದವರೆಗೂ 5 ಕಿ.ಮೀ. ದೂರವಿದ್ದು, ಇಂದು ಕೇವಲ 3 ಕಿ.ಮೀ. ಮಾತ್ರ ತಾಲೀಮು ನಡೆಸಲಾಯಿತು. ಈಶ್ವರ ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಭಾಗವಹಿಸಿದ್ದು, ಈವರೆಗೂ ಕಾಡಿನಿಂದ ನಾಡಿಗೆ ಈಶ್ವರ ಬಂದಿರಲಿಲ್ಲ. ಕಾಡಿನ ವಾತಾವರಣಕ್ಕೆ ಹೊಂದಿಕೊಂಡಿದ್ದ ಈಶ್ವರ ಈಗ ನಗರಕ್ಕೆ ಬಂದಿದ್ದು,

ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದ ವಾತಾವರಣಕ್ಕೆ ಈಶ್ವರ ಹೊಂದಿಕೊಳ್ಳಲಿದ್ದಾನೆ ಎಂದು ಆನೆಗಳನ್ನು ನೋಡಿಕೊಳ್ಳುತ್ತಿರುವ ವೈದ್ಯ ನಾಗರಾಜ್ ತಿಳಿಸಿದ್ದಾರೆ.

# ದಸರಾ ಯಶಸ್ಸಿಗೆ 16 ಉಪಸಮಿತಿ ರಚನೆ
ಮೈಸೂರು,ಆ.29- ವಿಶ್ವವಿಖ್ಯಾತ ಮೈಸೂರು ದಸರಾ ಯಶಸ್ಸಿಗೆ 16 ಉಪ ಸಮಿತಿಗಳನ್ನು ರಚಿಸಲಾಗಿದೆ. ಮೆರವಣಿಗೆ ಮತ್ತು ಪಂಜಿನ ಕವಾಯತ್ತು ಉಪ ಸಮಿತಿಗೆ, ಸಾಂಸ್ಕøತಿಕ ದಸರಾ ಉಪಸಮಿತಿ, ರೈತ ರ ದಸರಾ, ಕ್ರೀಡಾ ಉಪಸಮಿತಿ, ಲಲಿತಕಲೆ ಉಪಸಮಿತಿ, ದೀಪಾಲಂಕಾರ, ಕವಿಗೋಷ್ಠಿ, ಯೋಗ ದಸರಾ, ಯುವ ಸಂಭ್ರಮ ಮತ್ತು ಯುವ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ಆಹಾರ ಮೇಳ, ದಸರಾ ಚಲನಚಿತ್ರ ಉಪಸಮಿತಿಗಳನ್ನು ರಚನೆ ಮಾಡಲಾಗಿದೆ.

ಸಮಿತಿಗಳಿಗೆ ಉಪ ವಿಶೇಷಾಧಿಕಾರಿ, ಕಾರ್ಯಾಧ್ಯಕ್ಷ ಮತ್ತು ಕಾರ್ಯದರ್ಶಿ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಮಿತಿಗಳಿಗೆ ನಗರದ ನಾಗರಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ದಸರಾದ 16 ಉಪಸಮಿತಿಗಳನ್ನು ರಚನೆ ಮಾಡಿ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಆದೇಶ ಹೊರಡಿಸಿದ್ದಾರೆ.